ಬೆಂಗಳೂರು: ಖಾಸಗಿ ಬಸ್'ಗಳ ಆನ್ ಲೈನ್ ಟಿಕೆಟ್ ಗಳ ಬುಕ್ಕಿಂಗ್'ನ್ನು ಬಂದ್ ಮಾಡುವ ರಾಜ್ಯ ಸರ್ಕಾರ ನಿರ್ಧಾರ ಸರಿಯಲ್ಲ ಎಂದು ತಜ್ಞರು ಶುಕ್ರವಾರ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರಷ್ಟೇ ಹೇಳಿಕೆ ನೀಡಿದ್ದ ರಾಜ್ಯ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಅವರು, ಖಾಸಗಿ ಬಸ್ ಗಳ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ನಿಂದಾಗಿ ರಾಜ್ಯ ಸಾರಿಗೆ ಸಂಸ್ಥೆಗೆ ನಷ್ಟ ಎದುರಿಸುತ್ತಿದೆ. ಖಾಸಗಿ ಬಸ್ ಗಳ ಟಿಕೆಟ್ ಗಳು ಆನ್ ಲೈನ್ ಗಳಲ್ಲೇ ಲಭ್ಯವಿರುವುದರಿಂದ ಹೆಚ್ಚಿನ ಸಂಖ್ಯೆಯ ಜನರು ಅವುಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಖಾಸಗಿ ಬಸ್ ಗಳ ಆನ್ ಲೈನ್ ಟಿಕೆಟ್ ಬುಕ್ಕಿಂಗ್'ನ್ನು ಶೀಘ್ರದಲ್ಲಿಯೇ ಬಂದ್ ಮಾಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಈ ನಿರ್ಧಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ತಜ್ಞರು, ಖಾಸಗಿ ಬಸ್ ಗಳ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ನ್ನು ಬಂದ್ ಮಾಡಿಸಲು ಸಾಧ್ಯವೇ ಇಲ್ಲ. ಒಂದು ವೇಳೆ ರಾಜ್ಯ ಸರ್ಕಾರ ಬಂದ್ ಮಾಡಿಸಿದ್ದೇ ಆದರೆ, ಮುಜುಗರಕ್ಕೀಡಾಗಬೇಕಾಗುತ್ತದೆ ಎಂದು ಹೇಳಿದ್ದಾರೆ.
ವ್ಯವಸ್ಥಾಪನಾ ಮಂಡಳಿಯ ಸದಸ್ಯ ಕೆ.ಜಿ. ರವೀಂದ್ರ ಅವರು ಮಾತನಾಡಿ, ಖಾಸಗಿ ಬಸ್ ಗಳ ಆನ್'ಲೈನ್ ಟಿಕೆಟ್ ಬುಕ್ಕಿಂಗ್ ಗಳನ್ನು ಬಂದ್ ಮಾಡಿಸುವುದಕ್ಕೂ ಮುನ್ನ ಸರ್ಕಾರ ಹೊಸ ನಿಬಂಧನೆಗಳನ್ನು ಜಾರಿ ಮಾಡಬೇಕು. ರೆಡ್ ಬಸ್.ಇನ್ ನಂತಹ ಪ್ರಮುಖ ಬಸ್ ಬುಕ್ಕಿಂಗ್ ಸಂಗ್ರಹಕರು ಸದಾ ಕಾಲ ಕರ್ನಾಟಕದ ಬಸ್ ಗಳನ್ನೇ ಹೆಚ್ಚಾಗು ಬುಕ್ ಮಾಡಿಕೊಳ್ಳುತ್ತಾರೆ. ಪ್ರಯಾಣಿಕರಿಗೆ ಆನ್ ಲೈನ್ ಟಿಕೆಟ್ ಗಳನ್ನು ನೀಡುವುದರಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಈಗಾಗಲೇ ಇದರ ಮಾರುಕಟ್ಟೆ ವ್ಯಾಪ್ತಿ ಕೂಡ ವಿಸ್ತರಿಸಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಈ ರೀತಿಯ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಕೇವಲ ಕೆಎಸ್ಆರ್'ಟಿಸಿಗೆ ಹೆಚ್ಚಿನ ಪ್ರಯಾಣಿಕರನ್ನು ಸೆಳೆಯುವ ಸಲುವಾಗಿ ಸರ್ಕಾರ ಈ ರೀತಿಯ ನಿರ್ಧಾರ ತೆಗೆದುಕೊಂಡಿರುವುದು ಸಲಿಯಲ್ಲ. ಈ ಕುರಿತಂತೆ ಸಾರಿಗೆ ಇಲಾಖೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.
ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಬಸ್ ಸೇವೆ ಹಾಗೂ ಸೀಟುಗಳ ವ್ಯವಸ್ಥೆಗಳನ್ನು ಮಾಡಿದ್ದೇ ಆದರೆ, ಹೆಚ್ಚಿನ ಹಣವನ್ನು ನೀಡಿ ಜನರು ಖಾಸಗಿ ಬಸ್ ಗಳ ಮೊರೆ ಏಕೆ ಹೋಗುತ್ತಾರೆ?...ಹಬ್ಬಗಳು ಹಾಗೂ ರಜೆಗಳ ದಿನಗಳ ಸಂದರ್ಭದಲ್ಲಿ ಕೆಎಸ್ಆರ್'ಟಿಸಿ ಬಸ್ ಗಳು ಕಾರ್ಯನಿರ್ವಹಿಸುತ್ತವೆ. ಪ್ರಯಾಣಿಕರು ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆಗಳಿಗೆ ಹೊಂದಿಕೊಂಡಿದ್ದಾರೆ. ಸರ್ಕಾರದ ಇದೀಗ ತೆಗೆದುಕೊಂಡಿರುವ ನಿರ್ಧಾರ ಪ್ರಯಾಣಿಕರಿಗೆ ಸಂಕಷ್ಟವನ್ನು ಎದುರು ಮಾಡುತ್ತದೆ ಎಂದು ಪ್ರಯಾಣಿಕ ನಚಿಕೇತ್ ಬಿ.ಎಂ ಅವರು ಹೇಳಿದ್ದಾರೆ.