ವಿಧಾನಸೌಧ ಬಳಿ ರಸ್ತೆ ರಿಪೇರಿ ಕಾಮಗಾರಿ
ಬೆಂಗಳೂರು: ವಿಧಾನಸಭೆ ಚುನಾವಣೆ ಇನ್ನೂ ಕೆಲವೇ ತಿಂಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಮುಂದಿನ ನಾಲ್ಕು ತಿಂಗಳಲ್ಲಿ ನಗರದ ರಸ್ತೆಗಳು ಉತ್ತಮವಾಗಲಿವೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಾರ್ಜ್, ಯೋಜಿತ ನಗರವಲ್ಲ, ನಾಗರಿಕ ಸೌಲಭ್ಯಗಳು ರಸ್ತೆ ಸೌಲಭ್ಯಗಳನ್ನು ಸರಿಪಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ 1500 ಕಿಮೀ ರಸ್ತೆಯಿದೆ. ಅದರಲ್ಲಿ 500 ಕಿಮೀ ರಸ್ತೆಗೆ ಹೊಸದಾಗಿ ಡಾಂಬರು ಹಾಕಲು ನಿರ್ಧರಿಸಿ ಈಗಾಗಲೇ ಗುತ್ತಿಗೆದಾರರಿಗೆ ವಹಿಸಲಾಗಿದೆ. ಡಿಸೆಂಬರ್ ವೇಳೆಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ.ಈ ಹಿಂದಿಗಿಂತಲೂ ಉತ್ತಮವಾಗಿ ರಸ್ತೆ ಡಾಂಬರೀಕರಣ ನಡೆಯಲಿದೆ. ಡಾಂಬರೀಕರಣದ ಜೊತೆಗೆ ರಸ್ತೆ ಮತ್ತು ಚರಂಡಿ ಕಾಮದಗಾರಿಗಳನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ,
100 ಕಿಮೀ ವರೆಗೂ ವೈಟ್ ಟಾಪಿಂಗ್ ರಸ್ತೆ ಮಾಡಲಾಗುವುದು, ಮುಂಬರುವ ವರ್ಷಗಳಲ್ಲಿ ಎಲ್ಲಾ ಪ್ರಮುಖವಾದ ರಸ್ತೆಗಳಿಗೂ ವೈಟ್ ಟಾಪಿಂಗ್ ಮಾಡಲಾಗುವುದು, ಇದನ್ನು ಹೊರತು ಪಡಿಸಿ 20 ಕಿಮೀ ರಸ್ತೆಯನ್ನು ಟೆಂಡರ್ ಶ್ಯೂರ್ ಅಡಿ ಅಭಿವೃದ್ಧಿಗೊಳಿಸಲಾಗುವುದು, ಮುಂದಿನ ಮೂರು ತಿಂಗಳಲ್ಲಿ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಸರಿಯಾಗಲಿವೆ ಎಂದು ತಿಳಿಸಿದ್ದಾರೆ.