ಪ್ರತ್ಯೇಕ ಧರ್ಮದ ಮಾನ್ಯತೆಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ನಡೆದ ಬೃಹತ್ ಸಮಾವೇಶ
ಹುಬ್ಬಳ್ಳಿ: ಪ್ರತ್ಯೇಕ ಧರ್ಮದ ಮಾನ್ಯತೆ ಕುರಿತ ಹೋರಾಟಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದವರು ಸ್ಪಂದಿಸದಿದ್ದರೆ ಪ್ರತ್ಯೇಕವಾಗಿ ಲಿಂಗಾಯತ ಮಹಾ ಪರಿಷತ್ ರಚನೆ ಮಾಡಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಎಚ್ಚರಿಕೆ ನೀಡಿದ್ದಾರೆ.
ಪ್ರತ್ಯೇಕ ಧರ್ಮದ ಮಾನ್ಯತೆಗೆ ಆಗ್ರಹಿಸಿ ಭಾನುವಾರ ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ನಡೆದ ಲಿಂಗಾಯತ ರ‍್ಯಾಲಿಯಲ್ಲಿ ಮಾತನಾಡಿದ ಹೊರಟ್ಟಿ ಅವರು, ' ಪ್ರತ್ಯೇಕ ಧರ್ಮದ ಹೋರಾಟದ ಕುರಿತಂತೆ ಹಲವಾರು ಬಾರಿ ಮನವಿ ಮಾಡಿದರೂ ಶ್ಯಾಮನೂರು ಶಿವಶಂಕರಪ್ಪ ಅವರು ಸ್ಪಂದಿಸಿಲ್ಲ. ಮೊದಲು ಸಮಸ್ಯೆಗೆ ಸ್ಪಂದಿಸಿ... ಅನಿವಾರ್ಯ ಪ್ರತ್ಯೇಕವಾಗಿ ಲಿಂಗಾಯತ ಮಹಾ ಪರಿಷತ್ ಆಗುವಂತೆ ಮಾಡಬೇಡಿ. ರಚನೆ ಆದ ಮೇಲೆ ಯಾರನ್ನೂ ದೂರಬೇಡಿ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಮಾತನಾಡಿದ ಸಚಿವ ಎಂಬಿ ಪಾಟೀಲ್ ಅವರು, ಪಂಚಪೀಠದವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಕೇಳಿದ್ದಾರೆ. ಹಾಗಿದ್ದ ಮೇಲೆ ನಾವೇಕೆ ಅವರ ಪಾದಪೂಜೆ ಮಾಡಬೇಕು ಎಂದು ಪ್ರಶ್ನಿಸಿದರು.
ಇದರಿಂದಾಗಿ ಶಿಕ್ಷಣ ಸಂಸ್ಥೆಗಳ ಆದಾಯ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಶ್ಯಾಮನೂರು ಶಿವಶಂಕರಪ್ಪ, ಪ್ರಭಾಕರ ಕೋರೆ ವಿರೋಧಿಸುತ್ತಿದ್ದಾರೆ ಎಂದರು. "ನಮ್ಮಲ್ಲಿ ವೀರಶೈವರೂ ಧರ್ಮ ಒಡೆಯುವ ಹುನ್ನಾರ ಮಾಡುತ್ತಿದ್ದಾರೆ. ನಮ್ಮಲ್ಲಿ ವೀರಶೈವ-ಲಿಂಗಾಯತ ಅಂತ ಇಷ್ಟು ದಿನ ತುಳಿದಿದ್ದಾರೆ. ಇನ್ನು ಮುಂದೆ ನಾವು ಯಾರು ಮೋಸ ಹೋಗಬಾರದು. ನಾವು ಯಾರು ರಾಜಕೀಯ ಲಾಭಕ್ಕಾಗಿ ಸಮಾವೇಶ ಮಾಡುತ್ತಿಲ್ಲ. ಬದಲಾಗಿ ನಮಗೆ ವೋಟು ಕೊಟ್ಟ ಜನರ ಋಣ ತೀರಿಸೋ ಕೆಲಸ ಮಾಡುತ್ತಿದ್ದೇವೆ" ಎಂದು ಹೇಳಿದರು.
ಇದೇ ವೇಳೆ ಕೆಎಲ್ ಇ ಶಿಕ್ಷಣ ಸಂಸ್ಥೆಯ ಪ್ರಭಾಕರ್ ಕೊರೆ ಹಾಗೂ ವಿಪಕ್ಷ ನಾಯಕ ಶೆಟ್ಟರ್ ವಿರುದ್ಧ ವಾಗ್ಧಾಳಿ ನಡೆಸಿದ ಎಂಬಿ ಪಾಟೀಲ್ ಅವರು, "ನೀವು ಚುನಾವಣೆ ಗೆಲ್ಲಲು, ಲಿಂಗಾಯತ ವೋಟ್ ಬ್ಯಾಂಕ್ ಬೇಕು ಆಂದರೆ ನೀವು ವೀರಶೈವರ ಬಾಲ ಹಿಡಿದುಕೊಂಡು ಬೇಡಿ. ಲಿಂಗಾಯತ ಧರ್ಮದಲ್ಲಿ 99 ಒಳ ಪಂಗಡಗಳನ್ನು ಹೊಂದಿದ್ದು, ಇದರಲ್ಲಿ ವೀರಶೈವ ಸೇರಿದೆ. ಇಲ್ಲಿ ಸೇರಿರುವ ಎಲ್ಲಾ ಮುಖಂಡರ ಜಾತಿ ಪ್ರಮಾಣ ಪತ್ರದಲ್ಲಿ ಲಿಂಗಾಯತ ಎಂದಿದೆ. ವಿನಯ್ ಕುಲಕರ್ಣಿ, ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ್ ಹೊರಟ್ಟಿ ಅವರ ಪ್ರಮಾಣ ಪತ್ರದಲ್ಲಿಯೂ ಲಿಂಗಾಯತ ಎಂದಿದೆ. ವೀರಶೈವ ಎಂದು ಎಲ್ಲಿಯೂ ದಾಖಲಾಗಿಲ್ಲ" ಎಂದು ಟೀಕಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics