14 ವಾಹನಗಳನ್ನು ಓಡಿಸಿ ದಾಖಲೆ ಬರೆದ 7 ವರ್ಷದ ಬಾಲಕಿ
ಮೈಸೂರು: 7 ವರ್ಷದ ಬಾಲಕಿಯೊಬ್ಬಳು 14 ವಾಹನಗಳನ್ನು ಚಾಲನೆ ಮಾಡುವ ಮೂಲಕ 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ದಾಖಲೆ ನಿರ್ಮಿಸಿದ್ದಾಳೆ.
2 ತರಗತಿ ಓದುತ್ತಿರುವ ರಿಫಾ ತಸ್ಕೀನ್ ದಾಖಲೆ ನಿರ್ಮಿಸಿರುವ ಪುಟ್ಟ ಬಾಲಕಿಯಾಗಿದ್ದಾಳೆ. ದ್ವಿಚಕ್ರ ವಾಹನದಿಂದ ಬಹುಚತ್ರದ ಲಾರಿಯ ಸ್ವೀರಿಂಗ್ ಹಿಡಿದ ಕುಳಿತ ಬಾಲಕಿ ದೂಳೆಬ್ಬಿಸುವ ವೇಗದಲ್ಲಿ ಮೈಸೂರಿನ ಈದ್ಗಾ ಮೈದಾನದಲ್ಲಿ ಹಲವು ಸುತ್ತುಗಳನ್ನು ಹಾಕುವ ಮೂಲಕ ನೆರೆದಿದ್ದ ಜನರಲ್ಲಿ ಅಚ್ಚರಿಯನ್ನುಂಟು ಮಾಡಿದಳು. ಬಳಿಕ ಬನ್ನಿಮಂಟಪದ ಸಂತ ಸೋಸೆಫ್ ಶಾಲೆಯ ಆವರಣದಲ್ಲಿ ಒಟ್ಟು 14 ವಾಹನಗಳನ್ನು ಚಾಲನೆ ಮಾಡಿದ್ದಾಳೆ.
'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನ ತೀರ್ಪುಗಾರ ಸಂತೋಷ್ ಅಗರ್ವಾರ್ ಅವರ ಉಪಸ್ಥಿತಿಯಲ್ಲಿ ರಿಫಾ ತಸ್ಕೀನ್ ವಾಹನ ಚಾಲನೆ ಮಾಡಿದಳು, ಲಾರಿ, ಆ್ಯಂಬುಲೆನ್ಸ್, ದ್ವಿಚಕ್ರ ವಾಹನ ಹಾಗೂ ಕಾರು ಸೇರಿದಂತೆ 14 ವಿವಿಧ ವಾಹನಗಳನ್ನು ಓಡಿಸಿದ್ದಾಳೆ. ಈ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿ ಬಹುಚತ್ರ ವಾಹನ ಚಾಲನೆ ಮಾಡಿದ ಬಾಲಕಿ ಎಂಬ ಕೀರ್ತಿಗೆ ತಸ್ಕೀನ್ ಪಾತ್ರಳಾಗಿದ್ದಾಳೆಂದು ಸಂತೋಷ್ ಅಗರ್ವಾಲ್ ಅವರು ಘೋಷಣೆ ಮಾಡಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್' ಅಧಿಕೃತ ವೆಬ್ ಸೈಟ್'ನಲ್ಲಿ ಬಾಲಕಿಯ ಹೆಸರನ್ನು ಸೇರ್ಪಡೆಗೊಳಿಸಲಾಗುತ್ತದೆ. 2018-19ನೇ ಸಾಲಿನ ವಾರ್ಷಿಕ ನಿಯತಕಾಲಿಕೆಯಲ್ಲೂ ಬಾಲಕಿಯ ಹೆಸರನ್ನು ಪ್ರಕಟಿಸಲಾಗುತ್ತದೆ ಎಂದು ಅಗರ್ವಾಲ್ ಅವರು ತಿಳಿಸಿದ್ದಾರೆ.
ದಾಖಲೆ ಬರೆದಿರುವ ರಿಫಾಗೆ ಪ್ರಸ್ತುತ ತಾತ್ಕಾಲಿಕ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಮುಖ್ಯ ಪ್ರಮಾಣಪತ್ರವನ್ನು ಮುಂದಿನ 2 ವಾರಗಳಲ್ಲಿ ನೀಡಲಾಗುತ್ತದೆ. ವಾಹನಗಳ ಸಂಖ್ಯೆಗಳು, ದಾಖಲೆಯ ಪ್ರಾಮುಖ್ಯತೆ ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ಸ್ಥಳೀಯ ಸಾರಿಗೆ ಕಚೇರಿಯಿಂದ ಮಾಹಿತಿಗಳನ್ನು ಪಡೆದು, ಸ್ಥಳೀಯ ಶಾಸಕರ ಅನುಮತಿ ಪತ್ರ ಪಡೆದ ಬಳಿಕ ನೀಡಲಾಗುತ್ತದೆ ಎಂದಿದ್ದಾರೆ.
ತಾನು ಬರೆದಿರುವ ದಾಖಲೆಗೆ ಬಾಲಕಿ ರಿಫಾ ಸಂತಸವನ್ನು ವ್ಯಕ್ತಪಡಿಸಿದ್ದು, ಭವಿಷ್ಯದಲ್ಲಿ ನಾನು ಯುದ್ಧ ಪೈಲಟ್ ಆಗಬೇಕೆಂದು ಬಯಸಿದ್ದೇನೆಂದು ಹೇಳಿಕೊಂಡಿದ್ದಾಳೆ,
ಭಾರತೀಯ ವಾಯು ಸೇನಗೆ ಸೇರ್ಪಡೆಗೊಳ್ಳಲು ಪುತ್ರಿ ಬಯಸಿದ್ದಾಳೆಂದು ರಿಫಾ ತಂದೆ ತಜುದ್ದೀನ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics