ಕೂಡಲ ಸಂಗಮ ಪಂಚಮ ಸಾಲಿ ಪೀಠದ ಸ್ವಾಮೀಜಿ ಬಸವ ಜಯ ಮೃತ್ಯಂಜಯ ಸ್ವಾಮೀಜಿ
ಹುಬ್ಬಳ್ಳಿ: ವೀರಶೈವ ಸಮುದಾಯ ಕುರಿತಂತೆ ನಾನು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕೂಡಲ ಸಂಗಮ ಪಂಚಮ ಸಾಲಿ ಪೀಠದ ಸ್ವಾಮೀಜಿ ಬಸವ ಜಯ ಮೃತ್ಯಂಜಯ ಸ್ವಾಮೀಜಿಗಳು ಹೇಳಿದ್ದಾರೆ.
ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ವೀರಶೈವರ ಕುರಿತಂತೆ ನಾನು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಯಾರ ಮನನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ. ನನ್ನ ಹೇಳಿಕೆಯ ಹಾಗೂ ಭಾಷಣವನ್ನು ಬೇರೆಯದೇ ರೀತಿಯಲ್ಲಿ ಬಿಂಬಿಸಲಾಗಿದೆ. ಲಿಂಗಾಯತರಿಗೆ ಒಬ್ಬರು ಗುರುಗಳಿದ್ದರೆ, ವೀರಶೈವರಿಗೆ ಐವರು ಗುರುಗಳಿರುತ್ತಾರೆಂಬ ಅರ್ಥದಲ್ಲಿ ನಾನು ಹೇಳಿಕೆಯನ್ನು ನೀಡಿದ್ದೆ ಎಂದು ಹೇಳಿದ್ದಾರೆ.
ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ದೊರಕುವುದಕ್ಕೆ ವೀರಶೈವರು ಅಡ್ಡಿಪಡಿಸುತ್ತಿದ್ದಾರೆ. ಲಿಂಗಾಯತರು ಹಿಂದೂಗಳಲ್ಲ. ಲಿಂಗಾಯತ ಎನ್ನುವುದು ಪ್ರತ್ಯೇಕ ಧರ್ಮ. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಲಿಂಗಾಯತರು ಹಿಂದೂ ಧರ್ಮದ ಭಾಗವೆಂದು ಬಿಂಬಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಿನ್ನೆ ನಡೆದ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ವೀರಶೈವ ಸಮುದಾಯ ಕುರಿತಂತೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆಗೆ ವೀರಶೈವ ಸಮುದಾಯದಿಂದ ತೀವ್ರ ವಿರೋಧಗಳು ವ್ಯಕ್ತವಾಗಿದ್ದವು.