ಚಾಲಕನಿಲ್ಲದೆಯೇ 6 ಕಿ.ಮೀ ಚಲಿಸಿದ ರೈಲು ಇಂಜಿನ್!
ಕಲಬುರಗಿ: ಚಾಲಕನಿಲ್ಲದೆಯೇ ರೈಲೊಂದು 6 ಕಿ.ಮೀ ಚಲಿಸಿರುವ ಘಟನೆಯೊಂದು ಕಲಬುರ್ಗಿಯ ವಾಡಿ ರೈಲ್ವೇ ನಿಲ್ದಾಣದಲ್ಲಿ ಬುಧವಾರ ಸಂಜೆ ನಡೆದಿದೆ.
ಎಂದಿನಂತೆ ಚೆನ್ನೈ-ಮುಂಬೈ ಮೇಲ್ ರೈಲು ಬುಧವಾರ ಸಂಜೆ 3.30ಕ್ಕೆ ಬಂದು ಪ್ಲಾಟ್'ಫಾರಂ-4ರಲ್ಲಿ ನಿಂತಿದೆ. ಚೆನ್ನೈನಿಂದ ವಾಡಿವರೆಗೆ ಎಲೆಕ್ಟ್ರಿಕ್ ಎಂಜಿನ್ ನೊಂದಿಗೆ ಆಗಮಿಸುವ ಈ ರೈಲು, ನಂತರ ಡೀಸೆಲ್ ಎಂಜಿನ್ ನೊಂದಿಗೆ ಮುಂಬೈಗೆ ಸಾಗುತ್ತದೆ. ಅದರಂತೆ ಬುಧವಾರ ಸಂಜೆಯೂ ಚಾಲಕ ರೈಲಿನ ವಿದ್ಯುತ್ ಎಂಜಿನ್ ಅನ್ನು ಪ್ರತ್ಯೇಕಿಸಿ ಅದನ್ನು ಬೆರೆ ಹಳಿಯ ಮೂಲಕ ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿ ಪ್ರತ್ಯೇಕವಾಗಿ ನಿಲ್ಲಿಸಿದ್ದ.
ನಂತರ ಡೀಸೆಲ್ ಎಂಜಿನ್ ನೊಂದಿಗೆ ರೈಲು ಮುಂಬೈನತ್ತ ಮುಂದೆ ಸಾಗಿದೆ. ಆದರೆ, ಚಾಲಕ ಎಲೆಕ್ಟ್ರಿಕಲ್ ಎಂಜಿನ್ ನ ಚಕ್ರಕ್ಕೆ ವೇಗ ನಿಯಂತ್ರಕವನ್ನು ಅಳವಡಿಸುವಲ್ಲಿ ನಿರ್ಲಕ್ಷ್ಯ ತೋರಿದ್ದ ಹಿನ್ನಲೆಯಲ್ಲಿ ರೈಲು ಯಾರ ಅರಿವಿಗೂ ಬಾರದಂತೆ ಹಳಿಯಲ್ಲಿ ಮುಂದೆ ಸಾಗಿದೆ. ಇದು ಅರಿವಿಗೆ ಬರುತ್ತಿದ್ದಂತೆಯೇ ಸಿಬ್ಬಂದಿ ತಕ್ಷಣ ಎಲೆಕ್ಟ್ರಿಕ್ ಎಂಜಿನ್ ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ನಂತರ ಬೈಕ್ ಹತ್ತಿ ರೈಲ್ವೆ ಹಳಿಗೆ ಸಮಾನಾಂತರವಾಗಿ ನಿರ್ಮಿಸಿದ್ದ ರಸ್ತೆಯಲ್ಲಿ ಎಂಜಿನ್'ನ್ನು ಹಿಂಬಾಲಿಸಿದ್ದಾರೆ.
ಗಂಟೆಗೆ 10 ರಿಂದ 15 ಕಿ.ಮೀ. ವೇಗದಲ್ಲಿ ಸಾಗುತ್ತಿದ್ದ ಈ ರೈಲು ನಾಲವಾರ ರೈಲು ನಿಲ್ದಾಣ ತಲುಪಿದಾಗ ಬೈಕ್ ನಲ್ಲಿದ್ದ ಸಿಬ್ಬಂದಿ ಎಂಜಿನ್ ಹತ್ತಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಅಷ್ಟೊತ್ತಿಗಾಗಲೇ ರೈಲು 6 ಕಿ.ಮೀ ದೂರ ಕ್ರಮಿಸಿತ್ತು. ಈ ಮೂಲಕ ಸಿಬ್ಬಂದಿ ಭಾರೀ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಘಟನೆಗೆ ಸಂಬಂಧಿಸಿ ವಾಡಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂಜಿನ್ ಗಳ ಕುರಿತು ನಿಗಾ ವಹಿಸಬೇಕಾದ ಸಿನೀಯರ್ ಡಿಒಎಂ ಇಲಾಕೆಯ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics