ಬೆಂಗಳೂರು: ಮೂರು ದಿನಗಳ ನಡೆಯುವ ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆ ಸಂಭ್ರಮ ಈಗಾಗಲೇ ಕಳೆಕಟ್ಟಿದ್ದು, ಪರಿಷೆಗೆ ಇನ್ನು ಕೇವಲ ಒಂದು ದಿನ ಮಾತ್ರವೇ ಬಾಕಿಯಿದೆ.
ನ.13ರಂದು (ಸೋಮವಾರ) ಅಧಿಕೃತವಾಗಿ ಪರಿಷೆ ಉದ್ಘಾಟನೆಯಾಗಲಿದ್ದು, ಈಗಾಗಲೇ ಕಡಲೆಕಾಯಿ ಮಾರಾಟ ಮಳಿಗೆಗಳು ಬಸವನಗುಡಿಯ ಸುತ್ತಮುತ್ತ ತಲೆ ಎತ್ತಿವೆ.
ಕಡಲೆಕಾಯಿ ಪರಿಷೆಗೆ ನಗರದ ರಾಮಕೃಷ್ಣ ಮಠದಿಂದ ಎಪಿಎಸ್ ಕಾಲೇಜು ರಸ್ತೆ, ಬ್ಯೂಗಲ್ ರಾಕ್ ರಸ್ತೆಯಿಂದ ಡಿವಿಜಿ ರಸ್ತೆ, ಗೋಕುಲ ಇನ್ಸ್'ಟಿಟ್ಯೂಟ್ ಸಮೀಪವಿರುವ ಮಲ್ಲಿಕಾರ್ಜುನ ದೇವಸ್ಥಾನದ ರಸ್ತೆ, ಹನುಮಂತನಗರ 50 ಅಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಮೌಂಟ್ ಜಾಯ್ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರಿಗಳು ಬಿಡಾರ ಹೂಡಿದ್ದಾರೆ.
ವಾರಾಂತ್ಯದ ದಿನವಾದ ಶನಿವಾರ ವ್ಯಾಪಾರ ಚುರುಕುಗೊಂಡಿತ್ತು. ರಸ್ತೆಯ ಇಕ್ಕೆಲಗಳಲ್ಲಿ ನಾನಾ ತಳಿಯ ಕಡಲೆಕಾಯಿಗಳು, ಹಣ್ಣಿನ ವ್ಯಾಪಾರ, ಮಹಿಳೆಯರ ಅಲಂಕಾರಿಕ ವಸ್ತುಗಳು, ಗೃಹ ಉಪಯೋಗಿ ವಸ್ತುಗಳು, ಮಕ್ಕಳ ಆಟಿಕೆ ವಸ್ತುಗಳು, ಬಟ್ಟೆ ಮಳಿಗೆ, ಕಡಲೆಪುರಿ ಮಾರಾಟಗಾರರು ಸೇರಿದಂತೆ ವಿವಿಧ ಸಣ್ಣಪುಟ್ಟ ಮಾರಾಟಗಾರರು ವ್ಯಾಪಾರದಲ್ಲಿ ನಿರತರಾಗಿದ್ದಾರೆ.
ಇನ್ನು ಬಡವರ ಬಾದಾಮಿ ಕಡಲೆಕಾಯಿಗೆ ಬೇಡಿಕೆ ಹೆಚ್ಚಾಗಿದೆ. ಹಸಿ, ಹುರಿದ, ಬೇಯಿಸಿದ ತರಹೇವಾರಿ ತಳಿಯ ಕಲಡೆಕಾಯಿಗಳು ಸೇರಿಗೆ ರೂ.30 ರಿಂದ ರೂ.40ರವರೆಗೆ ಮಾರಾಟಗೊಳ್ಳುತ್ತಿವೆ. ಕಳೆದ ವರ್ಷ ನೆಲಕಚ್ಚಿದ್ದ ನೆಲಗಡಲೆ ಈ ವರ್ಷ ಮಳೆಯಿಂದಾಗಿ ಚೇತರಿಕೆ ಕಂಡಿದ್ದು, ಉತ್ತಮ ಇಳುವರಿ ಬಂದಿದೆ.
ಕಳೆದ ವರ್ಷ ಒಂದು ಚೀಲಕ್ಕೆ (40 ಕೆ.ಜಿ) ರೂ.5 ರಿಂದ ರೂ.6 ಸಾವಿರ ಇದ್ದ ಕಡಲೆಕಾಯಿ, ಈ ವರ್ಷ ರೂ.3 ರಿಂದ ರೂ.4,500ಕ್ಕೆ ಇಳಿಕೆಯಾಗಿದೆ. ಕಡಲೆಕಾಯಿ ಹುರಿಯುವುದಕ್ಕೆ ಮೂಟೆಗೆ ರೂ.300 ಕೂಲಿ ಕೇಳುತ್ತಾರೆ. ಭಾನುವಾರ ರಜೆ ಇರುವುದರಿಂದ ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದೇವೆಂದು ವ್ಯಾಪಾರಿಯೊಬ್ಬರು ಹೇಳಿಕೊಂಡಿದ್ದಾರೆ.
ಕಳೆದ ವರ್ಷ 280 ಗ್ರಾಂ ಕಡಲೆಕಾಯಿ ರೂ.40 ನೀಡಿದ್ದೆ. ಈ ಬಾರಿ ರೂ.25 ನೀಡಿದ್ದೇನೆ. ಅಲ್ಲದೆ, ಕಡಲೆಕಾಯಿಯ ರುಚಿ ಕೂಡ ಈ ಬಾರಿ ಬಹಳ ಚೆನ್ನಾಗಿದೆ ಎಂದು ಸುಜಾತಾ ಕೆ ಎಂಬುವವರು ಹೇಳಿದ್ದಾರೆ.
ಈ ಬಾರಿ ಉತ್ತಮವಾಗಿ ಮಳೆಯಾಗಿರುವುದರಿಂದ ಕಡಲೆಕಾಯಿ ಬೆಲೆ ಇಳಿಕೆಯಾಗಿದೆ. ಕಳೆದ ವರ್ಷ ಮೂಟೆಗೆ ರೂ.6000 ಇತ್ತು. ಈ ಬಾರಿ ರೂ.4,000 ಇದೆ ಎಂದು ವ್ಯಾಪಾರಿ ಶ್ರೀನಿವಾಸ್ ಅವರು ಹೇಳಿದ್ದಾರೆ.
ಚಿಕ್ಕ ಮಗುವಿದ್ದಾಗಿನಿಂದಲೂ ನಾನು ಪರಿಷೆಗೆ ಬರುತ್ತಿದ್ದೇನೆ. ಅಂದಿನಂತೆಯೇ ಇಂದಿಗೂ ಜನರು ಪರಿಷೆಗೆ ಬರುತ್ತಿದ್ದಾರೆ. ಜನರ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.