ವಿಧಾನಮಂಡಲ ಅಧಿವೇಶನಕ್ಕೆ ಚಕ್ಕರ್, ಡ್ಯಾನ್ಸ್'ಗೆ ಹಾಜರ್: ಅಕ್ರೋಶಕ್ಕೆ ಕಾರಣವಾಯ್ತು ಅಂಬರೀಶ್ ನಡೆ
ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ಖಾಸಗಿ ವೈದ್ಯರ ಮುಷ್ಕರ, ಸಾರ್ವಜನಿಕರ ನರಳಾಟ ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಗಂಭೀರ ಚರ್ಚೆಗಳು ನಡೆಯುತ್ತಿದ್ದು, ಅಧಿವೇಶನಕ್ಕೆ ಹಾಜರಾಗದೆ, ಖಾಸಗಿ ಕಾರ್ಯಕ್ರಮವೊಂದಕ್ಕೆ ಹಾಜರಾಗಿ ಶಾಸಕ ಅಂಬರೀಶ್ ಅವರು ನೃತ್ಯ ಮಾಡಿರುವ ವಿಡಿಯೋವೊಂದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಶಾಸಕ ಅಂಬರೀಶ್ ಅವರು ಅಧಿವೇಶನಕ್ಕೆ ಹಾಜರಾಗದೆ, ಸಿನಿಮಾವೊಂದರ ಆಡಿಯೋ ಬಿಡುಗಡೆ ಕಾರ್ಯಕ್ರದಲ್ಲಿ ಭಾಗಿಯಾಗಿ ವೇದಿಕೆಯಲ್ಲಿ ನಟಿ ಮಾಲಾ ಶ್ರೀ ಹಾಗೂ ಆ್ಯಂಕರ್ ಅನು ಶ್ರೀ ಅವರೊಂದಿಗೆರೊಂದಿಗೆ ಹೆಜ್ಜೆ ಹಾಕಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋಗೆ ಆಕ್ಷೇಪಗಳು ವ್ಯಕ್ತವಾಗತೊಡಗಿವೆ.
ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಸದ್ದು ಮಾಡುತ್ತಿರುವ ಚಿತ್ರ ಉಪ್ಪು ಹುಳಿ ಖಾರ ಚಿತ್ರ ಮುಂದಿನ ವಾರ ತೆರೆಗೆ ಬರುತ್ತಿದ್ದು, ಚಿತ್ರ ಬಿಡುಗಡೆ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಚಿತ್ರ ತಂಡ ನಗರದ ಖಾಸಗಿ ಹೋಟೆಲ್ ವೊಂದರಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿತ್ತು. ಈ ಸುದ್ದಿಗೋಷ್ಠಿಗೆ ಹಾಜರಾಗಿರುವ ಅಂಬರೀಶ್ ಅವರು ನಟಿ ಅನುಶ್ರೀ ಹಾಗೂ ಮಾಲಾಶ್ರೀ ಅವರೊಂದಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಡುತ್ತಿದ್ದು, ಅಧಿವೇಶಕ್ಕೆ ಹಾಜರಾಗದೆ, ನಟಿಯರೊಂದಿಗೆ ಹೆಜ್ಜ ಹಾಕಿರುವ ಅಂಬರೀಶ್ ಅವರ ಈ ನಡೆಗೆ ಟೀಕೆಗಳು ವ್ಯಕ್ತವಾಗುತ್ತಿವೆ.