ಬೆಂಗಳೂರು: ಸಿಲಿಂಡರ್ ಸೋರಿಕೆಯಿಂದ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ಹೆಬ್ಬಗೋಡಿಯ ಒಂದೇ ಕುಟುಂಬದ ನಾಲ್ವರಲ್ಲಿ ಮೂವರು ಮೃತಪಟ್ಟಿದ್ದಾರೆ. ನಾಲ್ಕನೇ ವ್ಯಕ್ತಿಯ ಆರೋಗ್ಯ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಅಸ್ಸಾಂ ಮೂಲದವರಾಗಿರುವ ಇವರ ಕುಟುಂಬದವರು ಮೃತದೇಹಗಳನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗಲು ಆರ್ಥಿಕವಾಗಿ ಅಷ್ಟೊಂದು ಶಕ್ತರಾಗಿಲ್ಲದಿರುವುದರಿಂದ ಇಲ್ಲಿಯೇ ಅಂತ್ಯಸಂಸ್ಕಾರ ನಡೆಸಲಾಯಿತು.
ಮೃತಪಟ್ಟವರನ್ನು ವಿಕಾಸ್ ಪ್ರದಾನ್, ಅವರ ಪತ್ನಿ ಕರ್ಣಾ, ಸಂಬಂಧಿಕರಾದ ದೇವನ್ ಎಂದು ಗುರುತಿಸಲಾಗಿದೆ. ಚವನ್ ಅಧಿಕಾರಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಶವಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯಸಂಸ್ಕಾರವನ್ನು ಮೈಸೂರು ರಸ್ತೆಯಲ್ಲಿರುವ ಶವಾಗಾರದಲ್ಲಿ ನಡೆಸಲಾಯಿತು ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.