ಬೆಳಗಾವಿ: ರಾಜ್ಯ ಸರ್ಕಾರದ ಉದ್ದೇಶಿತ ಕೆಪಿಎಂಇ ಕಾಯ್ದೆಗೆ ಸಂಬಂಧಿಸಿದಂತೆ ಸರ್ಕಾರ ಖಾಸಗಿ ವೈದ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಕಾಯ್ದೆ ಜಾರಿ ಮಾಡಲಿದೆ. ಹೀಗಾಗಿ ವೈದ್ಯರು ಕೂಡಲೇ ಪ್ರತಿಭಟನೆಯನ್ನು ಕೈ ಬಿಡಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಸಿದ್ದರಾಮಯ್ಯ ಅವರು, "ಬೆಳಗಾವಿಯಲ್ಲಿ ಖಾಸಗಿ ವೈದ್ಯರ ತಂಡವನ್ನು ಭೇಡಿ ಮಾಡಿ ಚರ್ಚಿಸಿದ್ದೇನೆ. ಈ ವೇಳೆ ವೈದ್ಯರ ಮನವಿಯನ್ನು ಆಲಿಸಿದ್ದು, ಖಾಸಗಿ ವೈದ್ಯರನ್ನೂ ಗಣನೆಗೆ ತೆಗೆದುಕೊಂಡೇ ಕೆಪಿಎಂಇ ಕಾಯ್ದೆಯನ್ನು ಮಂಡಿಸುತ್ತೇವೆ. ವೈದ್ಯರ ಮುಷ್ಕರದಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ವೈದ್ಯರು ತಮ್ಮ ಪ್ರತಿಭಟನೆ ಕೈ ಬಿಡಬೇಕು ಎಂದು ಹೇಳಿದ್ದಾರೆ.
ಅಂತೆಯೇ ಈಗಾಗಲೇ ಕೆಪಿಎಂಕಾಯ್ದೆ-2007 ಜಾರಿಯಲ್ಲಿದ್ದು, ಸರ್ಕಾರ ಕೇವಲ ಇದರಲ್ಲಿ ಕೆಲ ತಿದ್ದುಪಡಿಗಳನ್ನು ಮಾತ್ರ ಮಾಡುತ್ತಿದೆ. ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ದುಬಾರಿ ವೈದ್ಯಕೀಯ ಶುಲ್ಕಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಇದಾಗ್ಯೂ ಸರ್ಕಾರ ಖಾಸಗಿ ವೈದ್ಯರು ಹಾಗೂ ಆಸ್ಪತ್ರೆಗಳ ಬಗ್ಗೆಯೂ ಚರ್ಚಿಸಿದ್ದು, ರೋಗಿಗಳು ಮತ್ತು ಆಸ್ಪತ್ರೆಗಳ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಕಾಯ್ದೆ ತಿದ್ದುಪಡಿ ತರುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದೇ ವೇಳೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವಿರುದ್ಧವೂ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಐಎಂಎ ನಿರ್ಧಾರ ನಿಜಕ್ಕೂ ಅಚ್ಚರಿ ತಂದಿದೆ. ರಾಜ್ಯದಲ್ಲಿ ವೈದ್ಯಕೀಯ ಸೇವೆಗಳ ಸ್ಥಗಿತದಿಂದಾಗಿ ಜನ ಸಾಮಾನ್ಯರು ಪರದಾಡುತ್ತಿದ್ದಾರೆ. ವೈದ್ಯರನ್ನು ದೇವರಂತೆ ನೋಡಲಾಗುತ್ತದೆ. ವೈದ್ಯ ವೃತ್ತಿ ತುಂಬಾ ಜವಾಬ್ದಾರಿಯುತ ವೃತ್ತಿಯಾಗಿದೆ. ಹೀಗಾಗಿ ನಾನು ಈ ಮೂಲಕ ಪ್ರತಿಭಟನೆ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ವೈದ್ಯರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಅವಕಾಶವಾದಿ ರಾಜಕಾರಣ ಬೇಡ: ಬಿಜೆಪಿ ವಿರುದ್ಧ ಸಿದ್ದು ಕೆಂಡ
ಇನ್ನು ವೈದ್ಯರ ಮುಷ್ಕರ ವಿಚಾರವನ್ನು ಬಿಜೆಪಿ ರಾಜಕೀಯ ಗೊಳಿಸುತ್ತಿದೆ ಎಂದು ಆರೋಪಿಸಿರುವ ಸಿದ್ದರಾಮಯ್ಯ ಅವರು, ಬಿಜೆಪಿ ನಾಯಕರು ಅವಕಾಶವಾದಿ ರಾಜಕಾರಣ ಮಾಡುತ್ತಿದ್ದಾರೆ. ಮುಷ್ಕರ ನಿರತ ವೈದ್ಯರಿಗೆ ಬೆಂಬಲ ನೀಡಿ ಪರೋಕ್ಷವಾಗಿ ಅವರನ್ನು ಪ್ರಚೋದಿಸುತ್ತಿದ್ದಾರೆ. ರಾಜ್ಯದಲ್ಲಿ ವೈದ್ಯಕೀಯ ಸೇವೆಗಳು ದೊರೆಯದೆ ಜನ ತತ್ತಿರಿಸುತ್ತಿರುವ ಈ ಹೊತ್ತಿನಲ್ಲಿ ಬಿಜೆಪಿ ನೀಚ ರಾಜಕಾರಣಕ್ಕೆ ಇಳಿದಿದೆ. ಹೀಗಾಗಿ ವೈದ್ಯರು ಬಿಜೆಪಿ ಪಕ್ಷದ ಅವಕಾಶವಾದಿ ರಾಜಕಾರಣಕ್ಕೆ ಮರುಳಾಗದಂತೆ ಮನವಿ ಮಾಡಿದ್ದಾರೆ.