ಬೆಂಗಳುರು: ಕೆಎಸ್ ಒಯು ಮಾನ್ಯತೆ ರದ್ದು, ಮನನೊಂದ ಯುವತಿ ಆತ್ಮಹತ್ಯೆ
ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆ ಎಸ್ ಓ ಯು) ಮಾನ್ಯತೆ ರದ್ದಾದ ಕಾರಣ ಬೆಂಗಳೂರಿನ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕೆಎಸ್ ಓಯುನಲ್ಲಿ ಎನಿಮೇಷನ್ ಕೋರ್ಸ್ ಮಾಡುತ್ತಿದ್ದ ಬೆಂಗಲೂರು ವಿಜಯನಗರದ ಗಂಗಾಧರ್ ಬಡಾವಣೆಯ ಸಂಜನಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ದ್ವಿತೀಯ ಪಿಯುಸಿ ಅನುತ್ತೀರ್ಣಳಾಗಿದ್ದ ಆಕೆ ಮೈಸೂರಿನ ಕೆಎಸ್ ಓಯು ನಲ್ಲಿ ಅನಿಮೇಷನ್ ಕೋರ್ಸ್ ಗೆ ಸೇರಿದ್ದಳು.
ಆದರೆ ಯುಜಿಸಿ ವಿಶ್ವವಿದ್ಯಾನಿಲಯದ ಮಾನ್ಯತೆ ರದ್ದುಗೊಳಿಸಿದ ಕಾರಣ ಆಕೆಯ ಕೋರ್ಸ್ ಅನೂರ್ಜಿತವಾಗಿತ್ತು. ಇದರಿಂದ ತೀವ್ರ ಬೇಸರಗೊಂಡಿದ್ದ ಯುವತಿ ಖಿನ್ನತೆಗೆ ಒಳಗಾಗಿದ್ದಳು. 'ತಾನು ಅನಕ್ಷರಸ್ಥೆ' ಎಂದು ಸದಾಕಾಲ ತೊಳಲುತ್ತಿದ್ದ ಸಂಜನಾಗೆ ಆಕೆಯ ಪೋಷಕರು ಮಾನಸಿಕ ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದರು.
ಆದರೆ ಇದೀಗ ಆಕೆ ಅದೇ ಕಾರಣದಿಂದ ಖಿನ್ನತೆಗೀಡಾಗಿ ನ.15ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವತಿ ಆತ್ಮಹತ್ಯಾ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಯುಜಿಸಿ ನಿಯಮ ಉಲ್ಲಂಘಿಸಿ ಕೋರ್ಸ್ ಗಳನ್ನು ನಡೆಸುತ್ತಿದ್ದ ಮುಕ್ತ ವಿಶವಿದ್ಯಾನಿಲಯದ ಮಾನ್ಯತೆಯನ್ನು ಯುಜಿಸಿ ರದ್ದುಗೊಳಿಸಿದ್ದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.