ರಾಜ್ಯ

ಕೆಪಿಎಂಇ ತಿದ್ದುಪಡಿ ಕಾಯ್ದೆಯನ್ನು ಪರಿಶೀಲನೆ ನಡೆಸುತ್ತೇವೆ: ವೈದ್ಯರಿಗೆ ಮುಖ್ಯಮತ್ರಿ ಸಿದ್ದರಾಮಯ್ಯ ಭರವಸೆ

Manjula VN
ಬೆಳಗಾವಿ: ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೇರುವ ಸಲುವಾಗಿ ಜಾರಿಗೆ ತರಲು ಉದ್ದೇಶಿಸಿರುವ ಕೆಪಿಎಂಇ ತಿದ್ದುಪಡಿ ಕಾಯ್ದೆಯನ್ನು ಮರು ಪರಿಶೀಲನೆ ನಡೆಸುತ್ತೇವೆಂದು ವೈದ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಭರವಸೆ ನೀಡಿದ್ದಾರೆ. 
ಖಾಸಗಿ ವೈದ್ಯರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಹಿರಿಯ ಸಚಿವರು ನಡೆಸಿದ ಎರಡೂವರೆ ಗಂಟೆಗಳ ಸುದೀರ್ಘ ಸಂಧಾನ ಸಭೆ ಯಶಸ್ವಿಯಾಗಿದ್ದು, ಸಭೆಯಲ್ಲಿ ಪಾಲ್ಗೊಂಡಿದ್ದ ವೈದ್ಯಕೀಯ ಸಂಘದ ಪದಾಧಿಕಾರಿಗಳು ಮುಷ್ಕರವನ್ನು ಹಿಂಪಡೆಯಲು ನಿರ್ಧರಿಸಿದರು. 
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾಯ್ದೆಯಲ್ಲಿರುವ ಕೆಲವು ಅಂಶಗಳಿಗೆ ವೈದ್ಯರು ವಿರೋಧ ವ್ಯಕ್ತಪಡಿಸಿದ್ದು, ಕಾಯ್ದೆಯನ್ನು ಪರಿಶೀಲನೆ ನಡೆಸಿ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 
ಸಾಮಾನ್ಯ ಜನರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಬದಲಾವಣೆಗಳನ್ನು ಮಾತಲಾಗುತ್ತಿದ್ದು, ಬದಲಾವಣೆಗಳಿಂದ ಸಾರ್ವಜನಿಕರ ಮೇಲೆ ಯಾವುದೇ ರೀತಿಯ ಪರಿಣಾಮಗಳು ಬೀರುವುದಿಲ್ಲ. ವದಂತಿಗಳಿಗೆ ವೈದ್ಯರು ಕಿವಿಗೊಡಬಾರದು. ವೈದ್ಯರು ನೀಡಿರುವ ಸಲಹೆಗಳ ಮೇಲೆ ಸರ್ಕಾರ ಕಾಯ್ದೆಯನ್ನು ಪರಿಶೀಲನೆ ನಡೆಸಲು ನಿರ್ಧರಿಸಿದೆ. ಸರ್ಕಾರದೊಂದಿಗೆ ಸಹಕಾರದೊಂದಿಗೆ ಇರುವಂತೆ ವೈದ್ಯರ ಬಳಿ ಮನವಿ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದಾರೆ. 
ಇದೇ ವೇಳೆ ಖಾಸಗಿ ವೈದ್ಯರ ಮುಷ್ಕರದಿಂದಾಗಿ ರಾಜ್ಯದ ವಿವಿಧೆಡೆ ಜನರು ಸಾವನ್ನಪ್ಪಿರುವ ಜವಾಬ್ದಾರಿ ಹೊತ್ತುಕೊಳ್ಳಲು ನಿರಾಕರಿಸಿರುವ ಅವರು, ಮುಷ್ಕರದಿಂದಲೇ ಸಾವುಗಳು ಸಂಭವಿಸಿವೆ ಎಂಬುದಕ್ಕೆ ಸಾಕ್ಷ್ಯಾಧಾರಗಳೇನಿವೆ? ಎಂದು ಪ್ರಶ್ನಿಸಿದ್ದಾರೆ. 
ಬಳಿಕ ಕಾಯ್ದೆಯನ್ನು ಸಮರ್ಥಿಸಿಕೊಂಡಿರುವ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು, ಬಡವರಿಗೆ ಕಾಯ್ದೆ ಸಹಾಯಕವಾಗಿದ್ದು, ಕೆಪಿಎಂಇ ಕಾಯ್ದೆ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದ್ದಾರೆ. 
SCROLL FOR NEXT