ಕೆಪಿಎಂಇ ಕಾಯ್ದೆ ವಿವಾದ: ಸಹಜ ಸ್ಥಿತಿಯತ್ತ ಮರಳಿದ ಖಾಸಗಿ ಆಸ್ಪತ್ರೆಗಳು
ಬೆಂಗಳೂರು: ಕೆಪಿಎಂಇ ಕಾಯ್ದೆ ಕುರಿತಂತೆ ಸರ್ಕಾರದ ವಿರುದ್ಧ ಬಂಡಾಯವೆದ್ದು ತೀವ್ರ ಪ್ರತಿಭಟನೆ ನಡೆಸುತ್ತಿದ್ದ ಖಾಸಗಿ ವೈದ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭರವಸೆಗಳಿಗೆ ಮಣಿದು ಮುಷ್ಕರವನ್ನು ಹಿಂದಕ್ಕೆ ಪಡೆದುಕೊಂಡಿದ್ದು, ಖಾಸಗಿ ಆಸ್ಪತ್ರೆಗಳು ಸಹಜ ಸ್ಥಿತಿಯತ್ತ ಮರಳಿವೆ ಎಂದು ಶನಿವಾರ ತಿಳಿದುಬಂದಿದೆ.
ಸಾರ್ವಜನಿಕರ ಸಂಕಷ್ಟವನ್ನು ಪರಿಗಣಿಸದೆಯೇ ಮುಷ್ಕರದಲ್ಲಿ ನಿರತರಾಗಿದ್ದ ವೈದ್ಯರಿಗೆ ರಾಜ್ಯ ಹೈಕೋರ್ಟ್ ನೀಡಿದ ಇಂಜೆಕ್ಷನ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತಚ್ವದಲ್ಲಿ ನಡೆದ ಸಭೆಯಲ್ಲಿ ಸರ್ಕಾರ ಹಚ್ಚಿದ ಮುಲಾಮಿನ ಪರಿಣಾಮ ಕಳೆದ 5 ದಿನಗಳಿಂದ ರಾಜ್ಯ ಜನರನ್ನು ಕಂಗೆಡಿಸಿದ್ದ ವೈದ್ಯರ ಮುಷ್ಕರಕ್ಕೆ ನಿನ್ನೆಯಷ್ಟೇ ತೆರೆಬಿದ್ದಿತ್ತು.
ಖಾಸಗಿ ವೈದ್ಯರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಹಿರಿಯ ಸಚಿವರು ನಡೆಸಿದ ಎರಡೂವರೆ ಗಂಟೆಗಳ ಸುದೀರ್ಘ ಸಂಧಾನ ಸಭೆ ಯಶಸ್ವಿಯಾಗಿದ್ದು, ಸಭೆಯಲ್ಲಿ ಪಾಲ್ಗೊಂಡಿದ್ದ ವೈದ್ಯಕೀಯ ಸಂಘಟದ ಪದಾಧಿಕಾರಿಗಳು ಮುಷ್ಕರವನ್ನು ಹಿಂಪಡೆಯಲು ನಿರ್ಧರಿಸಿದರು.
ನಾರಾಯಣ ಹೆಲ್ತ್'ನ ಕಾರ್ಯನಿರ್ವಹಣಾಧಿಕಾರಿ ಜೋಸೆಫ್ ಪ್ರಸಂಗ ಅವರು ಮಾತನಾಡಿ, ಬೊಮ್ಮಸಂದ್ರದಲ್ಲಿರುವ ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು. ಸಾಮಾನ್ಯವಾಗಿ ಆಸ್ಪತ್ರೆಗೆ ಪ್ರತೀನಿತ್ಯ 8,000 ರೋಗಿಗಳು ಬರುತ್ತಿದ್ದರು. ನಿನ್ನೆ ರೋಗಿಗಳ ಸಂಖ್ಯೆ 1,000ಕ್ಕೆ ಏರಿಕೆಯಾಗಿತ್ತು ಎಂದು ಹೇಳಿದ್ದಾರೆ.
ಬನ್ನೇರುಘಟ್ಟದಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಸಾಮಾನ್ಯವಾಗಿ ಪ್ರತೀನಿತ್ಯ 700 ಹೊರರೋಗಿಗಳು ಬರುತ್ತಿರುತ್ತಾರೆ. ಆದರೆಸ ನಿನ್ನೆ ಇದರ ಸಂಖ್ಯೆ 600ಕ್ಕೆ ಇಳಿಕೆಯಾಗಿತ್ತು ಎಂದು ಸಾರ್ವಜಿಕ ಸಂಪರ್ಕ ಸಿಬ್ಬಂದಿ ಹೇಳಿದ್ದಾರೆ.
ಮಣಿಪಾಲ ಆಸ್ಪತ್ರೆಯಲ್ಲಿ ಪ್ರತೀನಿಯ್ 1,500 ಹೊರ ರೋಗಿಗಳು ಬರುತ್ತಿದ್ದಾರೆ. ಆದರೆ. ನಿನ್ನೆ ಇದರ ಸಂಖ್ಯೆ 900ಕ್ಕೆ ಇಳಿಕೆಯಾಗಿತ್ತು. ಯಾವುದೇ ರೀತಿಯ ಶಸ್ತ್ರಚಿಕಿತ್ಸೆಗಳನ್ನೂ ವೈದ್ಯರು ನಡೆಸಿಲ್ಲ ಎಂದು ಡಾ.ಮುರಳಿ ಮೋಹನ್ ಅವರು ಹೇಳಿದ್ದಾರೆ.