ರಾಜ್ಯ

ಖಾಸಗಿ ವೈದ್ಯರ ಮುಷ್ಕರದ ಸಂತ್ರಸ್ಥರು ದೂರು ನೀಡಿದರೆ ಪರಿಹಾರ: ಸಿಎಂ ಸಿದ್ದರಾಮಯ್ಯ

Srinivasamurthy VN
ದಾವಣಗೆರೆ: ಖಾಸಗಿ ವೈದ್ಯರ ಮುಷ್ಕರದಿಂದ ಯಾರಾದರೂ ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದರೆ ಅಂತಹವರು ದೂರು ನೀಡಿದರೆ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ದಾವಣಗೆರೆಯಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಚಾಲನೆಗಾಗಿ  ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಹೆಲಿಪ್ಯಾಡ್‌ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಖಾಸಗಿ ವೈದ್ಯರ ಮುಷ್ಕರದಿಂದಾಗಿ  ಚಿಕಿತ್ಸೆ ಸಿಗದೇ ಸಾವನ್ನಪ್ಪಿದವರ ಕುಟುಂಬಸ್ಥರು ಈ ಬಗ್ಗೆ ದೂರು ನೀಡಿದರೆ ಆ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಲಿದೆ ಎಂದು ಹೇಳಿದರು. ಇದೇ ವೇಳೆ ಕೆಪಿಎಂಇ ಕಾಯ್ದೆ ವಿವಾದ ಸಂಬಂಧ ಮಾತನಾಡಿದ ಸಿದ್ದರಾಮಯ್ಯ,  "ಖಾಸಗಿ ಆಸ್ಪತ್ರೆಗಳಿಗೆ ಸಂಬಂಧಿಸಿದ ವಿಧೇಯಕ ಸೋಮವಾರ ಅಧಿವೇಶನದಲ್ಲಿ ಮಂಡನೆ ಆಗಲಿದೆ. ಇದರಲ್ಲಿ ವೈದ್ಯರಿಗೆ ಜೈಲು ಶಿಕ್ಷೆ ಕಲ್ಪಿಸಲಾಗಿದೆ ಎಂಬ ಶಂಕೆ ಮೇರೆಗೆ ವೈದ್ಯರು ಪ್ರತಿಭಟನೆಗೆ ಇಳಿದಿದ್ದರು. ಅಂತಹ  ಕ್ರಮಗಳೇನೂ ಇಲ್ಲ ಎಂಬ ಭರವಸೆ ನೀಡಿದ ಬಳಿಕ ಮುಷ್ಕರ ವಾಪಾಸ್‌ ಪಡೆದಿದ್ದಾರೆ ಎಂದು ಹೇಳಿದರು.
ಇದೇ ವೇಳೆ ರಾಜ್ಯ ಸರ್ಕಾರ ಶೀಘ್ರ ಸಾಮೂಹಿಕ ಆರೋಗ್ಯ ವಿಮೆ ಯೋಜನೆ ಜಾರಿಗೆ ತರಲಿದ್ದು, ಇದಕ್ಕೆ ಈಗಾಗಲೇ ಸಂಪುಟ ಒಪ್ಪಿಗೆ ನೀಡಿದೆ. ಎಪಿಎಲ್, ಬಿಪಿಎಲ್ ಫಲಾನುಭವಿಗಳೆಲ್ಲರೂ ಈ ಯೋಜನೆಯ  ಫಲಾನುಭವಿಗಳಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
SCROLL FOR NEXT