ಬೆಳಗಾವಿ: ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ, ವಿದ್ಯುತ್ ಘಟಕ ಸ್ಥಾಪನೆ ಸಂಬಂಧ ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ತಕ್ಷಣ ಆ ಒಪ್ಪಂದ ರದ್ದುಪಡಿಸಿದರು ಎಂಬ ಛತ್ತೀಸಗಡ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಆರೋಪವನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಛತ್ತೀಸ್ ಗಢ ವಿದ್ಯುತ್ ಯೋಜನೆ ರದ್ದಾಗಿಲ್ಲ ಎಂದು ವಿಧಾನ ಪರಿಷತ್ ಗೆ ತಿಳಿಸಿದ್ದಾರೆ.
ಇಂದು ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್ ಅವರು, ಛತ್ತೀಸ್ ಗಢದಲ್ಲಿ ವಿದ್ಯುತ್ ಘಟಕ ಸ್ಥಾಪನೆ ಯೋಜನೆಯನ್ನು ಸರ್ಕಾರ ಕೈಬಿಟ್ಟಿಲ್ಲ. ಈ ಯೋಜನೆ ಬಗ್ಗೆ ರಮಣ್ ಸಿಂಗ್ ಅವರಿಗೆ ತಪ್ಪು ಮಾಹಿತಿ ನೀಡಿದಂತೆ ಕಾಣುತ್ತಿದೆ ಎಂದಿದ್ದಾರೆ.
ಕಲ್ಲಿದ್ದಲು ಕೊರೆತೆಯಿಂದಾಗಿ ಛತ್ತೀಸ್ ಗಢದಲ್ಲಿ ವಿದ್ಯುತ್ ಘಟಕ ಸ್ಥಾಪನೆ ವಿಳಂಬವಾಗುತ್ತಿದೆ. ಯೋಜನೆಗಾಗಿ ಕೇಂದ್ರ ಸರ್ಕಾರ ಕಲ್ಲಿದ್ದಲು ಗಣಿಯನ್ನು ಹಂಚಿಕೆ ಮಾಡಿದರೆ ರಾಜ್ಯ ಸರ್ಕಾರ ಈ ಕೂಡಲೇ ವಿದ್ಯುತ್ ಘಟಕ ಸ್ಥಾಪನೆ ಯೋಜನೆಗೆ ಚಾಲನೆ ನೀಡಲಿದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರು, ಕಲ್ಲಿದ್ದಲು ಗಣಿ ಹಂಚಿಕೆ ವಿಳಂಬವಾಗುತ್ತಿದ್ದರೆ ರಾಜ್ಯ ಸರ್ಕಾರ ಈ ಕೂಡಲೇ ಸರ್ವಪಕ್ಷ ನಿಯೋಗದೊಂದಿಗೆ ಸಂಬಂಧಿಸಿದ ಕೇಂದ್ರ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಬೇಕು ಎಂದರು.
ನಿನ್ನೆ ಬಿಜೆಪಿ ಪರಿವರ್ತನಾ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ರಮಣ್ ಸಿಂಗ್ ಅವರು, ವಿದ್ಯುತ್ ಘಟಕ ಸ್ಥಾಪನೆ ಸಂಬಂಧ ಕರ್ನಾಟಕ ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ತಕ್ಷಣ ಆ ಒಪ್ಪಂದ ರದ್ದುಪಡಿಸಿದರು ಎಂದು ಆರೋಪಿಸಿದ್ದರು.