ಬೆಂಗಳೂರು: ಕ್ರೊವೇಶಿಯಾದ ನಾಟಕಕಾರ ಮಿರೊ ಗಾವ್ರಾನ್ ಅವರು ರಚಿಸಿರುವ ‘all about women’ ನಾಟಕವನ್ನು ನಾಟಕಕಾರ ಅಭಿಷೇಕ್ ಅಯ್ಯಂಗಾರ್ ಕನ್ನಡಕ್ಕೆ ತಂದಿದ್ದು, ’ಸಂಬಂಧಗಳ ಸುತ್ತ ನಾಟಕ’ ನ. 23 ರಂದು ಬೆಂಗಳೂರಿನ ಕಲಾಗ್ರಾಮ ಸಭಾಂಗಣದಲ್ಲಿ ಸಂಜೆ 7.3೦ಕ್ಕೆ ಪ್ರದರ್ಶನಗೊಳ್ಳಲಿದೆ.
ಕನ್ನಡ ಮತ್ತು ಇಂಗ್ಲೀಷ್ ನಾಟಕಗಳ ಮೂಲಕ ಜನಪ್ರಿಯತೆ ಗಳಿಸಿರುವ ವಿಮೂವ್ ಥೀಯೇಟರ್ ನ ತಂಡದ ಸಂಬಂಧಗಳ ಸುತ್ತ ನಾಟಕವನ್ನು ಸಿಂಧು ಹೆಗಡೆ ನಿರ್ದೇಶಿಸಿದ್ದು, ಮೂವರು ನಟಿಯರು 15 ಪಾತ್ರಗಳನ್ನು ನಿರ್ವಹಿಸುವುದು ಈ ನಾಟಕದ ವೈಶಿಷ್ಟ್ಯವಾಗಿದೆ. ತಮ್ಮ ಜೀವನದ ವಿಭಿನ್ನ ಕಾಲಘಟ್ಟದಲ್ಲಿರುವ ಐವರು ಹೆಣ್ಣುಮಕ್ಕಳ ಐದು ವಿಶಿಷ್ಟ ಕಥೆಗಳನ್ನು ಹಣೆದಿರುವ ’ಸಂಬಂಧಗಳ ಸುತ್ತ’ ನಾಟಕವು, ಸ್ನೇಹ, ಪ್ರೀತಿ, ಮೋಹ, ದುರಾಸೆ ಮತ್ತು ಮುಗ್ಧ ಸಂಬಂಧಗಳ ಬಿಂಬವಾಗಿದೆ.
ಶ್ರೀಪ್ರಿಯ, ಸೌಂದರ್ಯ ನಾಗರಾಜ್, ಸುಷ್ಮಾ ನಂಜುಂಡ ಸ್ವಾಮಿ ಅಭಿನಯಿಸಲಿದ್ದಾರೆ. ಸಂಬಂಧಗಳು ಕಾಲದ ಗತಿಗೆ ಸಿಲುಕಿ ತಿರುವುಗಳನ್ನು ಪಡೆದು ಯಾವ ರೀತಿ ಬದಲಾವಣೆ ಕಾಣುತ್ತವೆ ಎಂಬುದನ್ನು ತಿಳಿಸುವುದೇ ನಾಟಕದ ಕಥಾಹಂದರವಾಗಿದೆ. ವಿನೂತನ ನಾಟಕಕ್ಕೆ ಮಧು ಎಸ್.ಎಸ್, ಕಿಶನ್ ನಾಗರಾಜ್ ಸಂಗೀತ ನೀಡಿದ್ದಾರೆ. ತನ್ನ ವಿಭಿನ್ನ, ವಿಶಿಷ್ಟ ಸಮಕಾಲೀನ ನಾಟಕಗಳಾದ ನಮ್ಮ ಮೆಟ್ರೋ, ಮಾಗಡಿ ಡೇಸ್, ಪಿ.ಎಸ್ ಐ ಡೋಂಟ್ ಲವ್ ಯು, ಕಾಕ್.ಟೇಲ್, ‘E=MC2’ ಮುಂತಾದ ಕನ್ನಡ ಮತ್ತು ಇಂಗ್ಲೀಷ್ ನಾಟಕಗಳ ಮೂಲಕ ವಿಮೂವ್ ಥೀಯೇಟರ್ ತಂಡವು ಜನಪ್ರಿಒಯತೆ ಗಳಿಸಿದೆ. ’ಸಂಬಂಧಗಳ ಸುತ್ತ’ ಎಂಬ ಹೊಸ ಕನ್ನಡ ನಾಟಕವನ್ನು ಮೊದಲ ಬಾರಿಗೆ ಪ್ರದರ್ಶಿಸುತ್ತಿದೆ.