ಬೆಂಗಳೂರು: ಕಳೆದ ವರ್ಷ ಎಂ.ಜಿ.ರಸ್ತೆಯಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆ ಈ ವರ್ಷ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಮತ್ತು ಮಹಿಳೆಯರ ರಕ್ಷಣೆಗೆ ಈ ವರ್ಷ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬ್ರಿಗೇಡ್ ರಸ್ತೆ ಮತ್ತು ಎಂ.ಜಿ.ರಸ್ತೆಯಲ್ಲಿ ಎಲ್ ಸಿಡಿ ಪರದೆಗಳನ್ನು ಅಳವಡಿಸಲು ನಿರ್ಧರಿಸಿದೆ.
ನಿನ್ನೆ ಪಾಲಿಕೆ ಸದಸ್ಯರು ಹೊಸ ವರ್ಷದ ಸಂದರ್ಭದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಚರ್ಚೆ ನಡೆಸಿದರು.
ಈ ಕುರಿತು ಬಿಬಿಎಂಪಿ ಮೇಯರ್ ಸಂಪತ್ ರಾಜ್, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿ, ಖಾಸಗಿ ಸಂಸ್ಥೆಗಳಿಂದ ಎಲ್ ಸಿಡಿ ಮೇಲ್ವಿಚಾರಣಾ ವ್ಯವಸ್ಥೆಯನ್ನು ಖರೀದಿಸಲು ನಾವು ಯೋಜಿಸಿದ್ದೇವೆ. ಪೊಲೀಸರೊಂದಿಗೆ ಚರ್ಚಿಸಿ ಬ್ರಿಗೇಡ್ ಮತ್ತು ಎಂ.ಜಿ.ರಸ್ತೆಯ ವಿವಿಧ ಕಡೆಗಳಲ್ಲಿ ಎಲ್ ಸಿಡಿ ಪರದೆಗಳನ್ನು ನಿಯೋಜಿಸಲಾಗುವುದು ಎಂದು ಹೇಳಿದರು.
ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ನಿಯೋಜಿಸಲು ಪ್ರತಿ ವಾರ್ಡ್ ಗೆ ತಲಾ 10 ಲಕ್ಷ ರೂಪಾಯಿ ಬಿಡುಗಡೆ ಮಾಡುತ್ತದೆ. ಅಂಗಡಿಗಳು, ಮಳಿಗೆಗಳು ಮತ್ತು ಇತರ ಸಂಘ ಸಂಸ್ಥೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳಿರುತ್ತವೆ. ಮಹಿಳೆಯರ ವಿರುದ್ಧ ಲೈಂಗಿಕ ಕಿರುಕುಳ, ಅತ್ಯಾಚಾರ, ದರೋಡೆಯಂತಹ ಪ್ರಕರಣಗಳು ನಡೆಯದಂತೆ ತಡೆಗಟ್ಟಲು ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಇನ್ನಷ್ಟು ಅಳವಡಿಸಿದರೆ ಒಳ್ಳೆಯದು. ಪ್ರತಿ ವಲಯಗಳಲ್ಲಿ ಸೂಕ್ಷ್ಮ ಪ್ರದೇಶಗಳ ಪಟ್ಟಿ ನೀಡುವಂತೆ ನಾವು ಚುನಾಯಿತ ಪ್ರತಿನಿಧಿಗಳಿಗೆ ಮನವಿ ಮಾಡಿದ್ದೇವೆ ಎಂದರು.
ಹೊಸ ವರ್ಷದ ಸಂದರ್ಭದಲ್ಲಿ ಮೆಟ್ರೊ ರೈಲು ಸಂಚಾರವನ್ನು ಬೆಳಗಿನ ಜಾವದವರೆಗೆ ವಿಸ್ತರಿಸಬೇಕೆಂದು ನಾವು ಮೆಟ್ರೊ ರೈಲು ನಿಗಮವನ್ನು ಕೋರುತ್ತೇವೆ. ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ಅಗ್ನಿ ಶಾಮಕ ಮತ್ತು ಆಸ್ಪತ್ರೆ ಸೇವೆ ತಕ್ಷಣವೇ ನಾಗರಿಕರಿಗೆ ಸಿಗುವಂತೆ ಕೇಳುತ್ತೇವೆ. ಜನರು ಸಂತೋಷವಾಗಿ ಸಹಜವಾಗಿ 2018ನ್ನು ಸ್ವಾಗತಿಸಬೇಕು ಎಂದರು.