ಹುಬ್ಬಳ್ಳಿ: ಬೀದಿನಾಯಿ ಕಡಿತದಿಂದ ಬಾಲಕ ಸಾವು, ನಗರ ಪಾಲಿಕೆ ವಿರುದ್ಧ ಜನರ ಆಕ್ರೋಶ
ಹುಬ್ಬಳ್ಳಿ: ಎರಡನೇ ತರಗತಿ ಬಾಲಕ ಬೀದಿ ನಾಯಿ ಕಡಿತದಿಂದ ಅಸುನೀಗಿದ ನಂತರ ನಗರದ ಜನತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ವಾಸವಿದ್ದ ಆಫ್ರೀದಿ ಬೇಪಾರಿ (7) ಮೃತಪಟ್ಟಿದ್ದಾನೆ. ಎರಡನೇ ತರಗತಿ ಓದುತ್ತಿದ್ದ ಬಾಲಕ ನ.9 ರಂದು ಶಾಲೆಗೆ ಹೋಗುವ ಸಮಯದಲ್ಲಿ ಬೀದಿನಾಯಿಯೊಂದು ಅವನ ಮೇಲೆ ದಾಳಿ ನಡೆಸಿತ್ತು.
ಬಾಲಕನ ಕೆನ್ನೆಗೆ ನಾಯಿ ಕಚ್ಚಿ ಗಂಭೀರ ಗಾಯವಾಗಿತ್ತು. ಆಗ ಪೋಷಕರು ಬಾಲಕನನ್ನು ಚಿಟಗುಪ್ಪಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಅಲ್ಲಿ ಸೂಕ್ತ ಚಿಕಿತ್ಸೆ ದೊರಕದ ಕಾರಣ ಅವನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮನೆಗೆ ಮರಳಿದ ಬಾಲಕನ ಆರೋಗ್ಯದಲ್ಲಿ ಮತ್ತೆ ಏರುಪೇರುಗಳು ಕಂಡುಬಂದಿದ್ದ ಕಾರಣ ಪುನಃ ಕಿಮ್ಸ್ ಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.
ಹುಬ್ಬಳ್ಳಿ ಧಾರವಾಡ ಆರೋಗ್ಯ ಅಧಿಕಾರಿ ಡಾ. ಪ್ರಭು ಬಿರಾದರ್ ಹೇಳಿದಂತೆ ಬಾಲಕನಿಗೆ ಆಸ್ಪತ್ರೆಯಲ್ಲಿ ರೇಬೀಸ್ ಚಿಕಿತ್ಸೆ ಕ್ರಮಗಳನ್ನು ಸೂಚಿಸಲಾಗಿತ್ತು. ಆದರೆ ಅವರ ಪೋಷಕರು ಬಾಲಕನನ್ನು ಮತ್ತೆ ಚಿಕಿತ್ಸೆ ಮುಂದುವರಿಸಲು ಬಂದಿರಲಿಲ್ಲ
ಹುಬ್ಬಳ್ಳಿ ಧಾರವಾಡ ಕಮಿಷನರ್ ಸಿದ್ದಲಿಂಗಯ್ಯ ಹಿರೇಮಠ್, ಬೀದಿ ನಾಯಿಗಳ ನಿರ್ನಾಮವು ಇದಕ್ಕೆ ಸೂಕ್ತಕ್ರಮವಾಗಿರುವುದಿಲ್ಲ ಎಂದಿದ್ದಾರೆ. ನಾವು ನಾಯಿಗಳಿಗೆ ಶಸ್ತ್ರಚಿಕಿತ್ಸೆ ಕೊಡಿಸಿ ಅವುಗಳನ್ನು ನಪುಂಸಕವಾಗುವಂತೆ ಮಾಡಬಹುದು. ರಸ್ತೆ ಮೇಲೆ ಕಸ ಹಾಕದೆಯೆ ನಾಗರಿಕರು ಸಹ ನಮಗೆ ಸಹಕರಿಸಬೇಕಿದೆ" ಅವರು ಹೇಳಿದ್ದಾರೆ