ಬೆಂಗಳೂರು: ಕಾರು ಅಪಘಾತ ಎಸಗಿ ಆಸ್ಪತ್ರೆಯಿಂದ ಪರಾರಿಯಾಗಿದ್ದ ಉದ್ಯಮಿ ಆದಿಕೇಶವಲು ಮೊಮ್ಮಗ ಗೀತಾ ವಿಷ್ಣುವನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಗೀತಾ ವಿಷ್ಣು ಬಂಧನವನ್ನು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ವಿಚಾರಣೆ ನಂತರ ಮತ್ತಷ್ಟು ಮಾಹಿತಿಗಳನ್ನು ಬಹಿರಂಗ ಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಸಿಸಿಬಿ ಎಸಿಪಿ ಎದುರು ಗೀತಾ ವಿಷ್ಣು ಶರಣಾಗಿರುವುದಾಗಿ ಮೂಲಗಳು ತಿಳಿಸಿವೆ. ಯಾರೋ ಒಬ್ಬರು ಟೆಲಿಫೋನ್ ಬೂತ್ ನಿಂದ ಕರೆ ಮಾಡಿ ವಿಷ್ಣು ಇರುವ ಸ್ಥಳದ ಮಾಹಿತಿ ನೀಡಿದರು. ಕರೆ ಮಾಡಿದ ವ್ಯಕ್ತಿ ಗೀತಾ ವಿಷ್ಣುವೇ ಆಗಿದ್ದಾನೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಬುಧವಾರ ಮಧ್ಯಾಹ್ನದ ನಂತರ ಆತನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುವುದು.
ಕಳೆದ ಸೆಪ್ಟಂಬರ್ 28 ರಂದು ಸೌತ್ ಎಂಡ್ ಸರ್ಕಲ್ ನಲ್ಲಿ ಕಾರು ಅಪಘಾತ ಮಾಡಿದ ಬಳಿಕ ವಿಷ್ಣು ಆಸ್ಪತ್ರೆಗೆ ದಾಖಲಾಗಿದ್ದ. ಆತನ ಕಾರಿನಲ್ಲಿ ಪೊಲೀಸರು 300 ಗ್ರಾಂ ಗಾಂಜಾ ವಶ ಪಡಿಸಿಕೊಂಡಿದ್ದರು. ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ ಆತ ಶುಕ್ರವಾರ ಬೆಳಗ್ಗೆ ಅಲ್ಲಿಂದ ಪರಾರಿಯಾಗಿದ್ದ.