ಬೆಂಗಳೂರು: ಗಿಡಮೂಲಿಕೆ ಔಷಧ ವ್ಯಾಪಾರಕ್ಕಾಗಿ ಆಫ್ರಿಕಾ ರಾಷ್ಟ್ರಕ್ಕೆ ತೆರಳಿ ರವಾಂದಾದಲ್ಲಿ ಬಂಧನಕ್ಕೊಳಗಾಗಿದ್ದ 11 ಮಂದಿ ಹಕ್ಕಿಪಿಕ್ಕಿ ಜನಾಂಗದವರನ್ನು ಸುರಕ್ಷಿತವಾಗಿ ಬಿಡಿಸುವಲ್ಲಿ ಗೃಹ ಇಲಾಖೆ ಯಶಸ್ವಿಯಾಗಿದೆ.
ಶಿವಮೊಗ್ಗ ಜಿಲ್ಲೆಯವರಾದ ಹಕ್ಕಿಪಿಕ್ಕಿಗಳು ಮೂಲಿಕೆ ಔಷಧಗಳ ಮಾರಾಟಕ್ಕೆಂದು ರವಾಂಡಾಗೆ ತೆರಳಿದ್ದ ಸಮಯ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದರು.
ಹಕ್ಕಿಪಿಕ್ಕಿ ಬುಡಕಟ್ಟು ಜನರ ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಗೃಹ ಸಚಿವ ರಾಮಲಿಂಗಾರೆಡ್ಡಿ, ಅಗತ್ಯ ಕ್ರಮ ಜರುಗಿಸಲು ಪ್ರಧಾನ ಕಾರ್ಯದರ್ಶಿ ಸುಭಾಷ್‌ಚಂದ್ರ, ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ ಅವರಿಗೆ ಸೂಚನೆ ನೀಡಿದ್ದರು. ಈ ಇಬ್ಬರು ಅಧಿಕಾರಿಗಳು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದ್ದಲ್ಲದೆ ರಾಯಭಾರ ಕಚೇರಿ ಜತೆಗೂ ಸಂಪರ್ಕ ಸಾಧಿಸಿದ್ದರು. ಈ ಪ್ರಯತ್ನಗಳ ಹಿನ್ನೆಲೆಯಲ್ಲಿ ಇದೀಗ 11 ಮಂದಿ ಬಂಧಿತರ ಬಿಡುಗಡೆಯಾಗಿದೆ.
ಬಿಡುಗಡೆಗೊಂಡಿರುವ ಹಕ್ಕಿಪಿಕ್ಕಿ ಜನರನ್ನು ರಾಜ್ಯಕ್ಕೆ ಕರೆಸಿಕೊಳ್ಳಲು ತ್ವರಿತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿದೆ.