ಮೈಸೂರು: ಕಳ್ಳನೆಂದು ಅನುಮಾನಿಸಿ ವ್ಯಕ್ತಿಯೊಬ್ಬನಿಗೆ ಥಳಿಸಿ ಹತ್ಯೆ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಕೊರೆಹುಂಡಿ ಗ್ರಾಮದಲ್ಲಿ ನಡೆದಿದೆ.
ಬದನವಾಗಿಲು ಗ್ರಾಮದ ರಮೇಶ್ ಅಲಿಯಾಸ್ ಕೋತಿ ರಮೇಶ್ (43) ಮೃತ ವ್ಯಕ್ತಿ. ಈತ ಚಾಮಲಪುರದಹುಂಡಿ ಎಕ್ಸ್ ಟೆನ್ಸನ್ ನಲ್ಲಿ ವಾಸವಿದ್ದ. ಆತನನ್ನು ಕಳ್ಳನೆಂದು ಶಂಕಿಸಿದ ಚಂದ್ರಶೇಖರ್ ಎಂಬಾತ ಭಾನುವಾರ ನಸುಕಿನಲ್ಲಿ ವಿದ್ಯುತ್ ಕಂಬಕ್ಕೆ ಕಟ್ಟಿದ್ದಾನೆ. ನಂತರ ಗ್ರಾಮಸ್ಥರೆಲ್ಲಾ ಸೇರಿ ಥಳಿಸಿದ್ದಾರೆ.
ಯಾರೋ ನನ್ನನ್ನು ಅಟ್ಟಾಡಿಸಿಕೊಂಡು ಬಂದರು. ತಪ್ಪಿಸಿಕೊಳ್ಳಲು ಕೊಟ್ಟಿಗೆಗೆ ಬಂದು ಅವಿತುಕೊಂಡೆ’ ಎಂದು ರಮೇಶ್ ಪದೇ ಪದೇ ಬೇಡಿಕೊಂಡಿದ್ದಾನೆ, ಆದರೆ ಆತನ ಮಾತಿಗೆ ಬೆಲೆ ಕೊಡದ ಗ್ರಾಮಸ್ಥರು ಆತನನ್ನು ಥಳಿಸಿದ್ದಾರೆ. ನಂತರ ರಮೇಶ್ ಕುಸಿದು ಬಿದ್ದಿದ್ದಾನೆ. ಆತ ಸಾವನ್ನಪ್ಪಿರುವುದು ತಿಳಿದು ಬಂದಿದೆ,. ರಮೇಶ್ ಸಹೋದರ ರಾಜು ಚಂದ್ರಶೇಖರ್ ಮತ್ತು ಕೆಂಪರಾಜು ಎಂಬುವವರ ವಿರುದ್ಧ ನಂಜನಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.