ಮೊನ್ನೆ ಶುಕ್ರವಾರದ ಮಳೆಗೆ ಚರಂಡಿ ನೀರಿನಲ್ಲಿ ಕೊಚ್ಚಿಹೋದ ಅರ್ಚಕ ವಾಸುದೇವ ಭಟ್ ಅವರ ಪತ್ನಿಯನ್ನು ಸಮಾಧಾನಪಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ನಗರದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಉಂಟಾಗಿದ್ದ ಪ್ರವಾಹದ ಸಂದರ್ಭದಲ್ಲಿ 65 ವರ್ಷದ ಮಹಿಳೆ ಜಯಮ್ಮ ಮುಳುಗಿ ಹೋಗುತ್ತಿದ್ದ 8 ಮಕ್ಕಳನ್ನು ರಕ್ಷಿಸಿ ಜೀವ ಕಾಪಾಡಿದ್ದಾರೆ.
ಕುರುಬರಹಳ್ಳಿ ನಿವಾಸಿಯಾಗಿರುವ ಜಯಮ್ಮ ಮೊನ್ನೆ ಶುಕ್ರವಾರ ಸಂಜೆ ಭೀಕರ ಮಳೆ ಸುರಿದು ತಮ್ಮ ಮನೆಗೆ ನೀರು ನುಗ್ಗಿದ್ದಾಗ ಧೈರ್ಯ ಮಾಡಿ ತಮ್ಮ ಮನೆಯಲ್ಲಿ ಬಾಡಿಗೆಗಿದ್ದ ಎರಡರಿಂದ ಹತ್ತು ವರ್ಷದೊಳಗಿನ ಮಕ್ಕಳನ್ನು ಕಾಪಾಡಿದ್ದಾರೆ.
ಮಳೆ ಬಂದು ನೀರು ನುಗ್ಗಿದ್ದಾಗ ಈ ಮಕ್ಕಳೆಲ್ಲಾ ಮನೆಯೊಳಗೆ ಸಿಕ್ಕಿ ಹಾಕಿಕೊಂಡಿದ್ದರು. ಇವರ ಪೋಷಕರು ಕೆಲಸಕ್ಕೆ ಹೊರಹೋದವರು ವಾಪಸ್ ಬಂದಿರಲಿಲ್ಲ. ಮಕ್ಕಳ ಸಹಾಯಕ್ಕೆ ಯಾರೂ ಬಂದಿರಲಿಲ್ಲ. ಆಗ ಜಯಮ್ಮ ರಸ್ತೆ ದಾಟಿ ಹೋಗಿ ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ಕಾಪಾಡಿದ್ದಾರೆ.
ಅಂದು ಬಹಳ ಕತ್ತಲೆಯಾಗಿತ್ತು. ಮನೆಯೊಳಗೆ ಮಕ್ಕಳು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಗೊತ್ತಾಯಿತು. ಮೊಣಕಾಲಿನ ತನಕ ನೀರು ನುಗ್ಗಿತ್ತು. ಮಕ್ಕಳನ್ನು ಹೊರತೆಗೆಯದಿದ್ದರೆ ಖಂಡಿತಾ ಮುಳುಗುತ್ತಿದ್ದರು ಎಂದು ಘಟನೆಯನ್ನು ಜಯಮ್ಮ ವಿವರಿಸುತ್ತಾರೆ.
ನೀರಿನಲ್ಲಿ ಮುಳುಗಿದ್ದ ಮನೆಯಿಂದ ಮಕ್ಕಳನ್ನು ಹೊರತೆಗೆಯುವುದು ಸುಲಭವಾಗಿರಲಿಲ್ಲ. ಅಲ್ಲಿ ಸಹಾಯ ಮಾಡಲು ಯಾರೂ ಇರಲಿಲ್ಲ. ಇಬ್ಬರು ಮಕ್ಕಳನ್ನು ಜೊತೆಯಲ್ಲಿ ತಮ್ಮ ಹೆಗಲ ಮೇಲೆ ಕುಳ್ಳಿರಿಸಿಕೊಂಡು ನೀರು ತುಂಬಿದ ರಸ್ತೆಯಲ್ಲಿಯೇ 100 ಮೀಟರ್ ಗಳಷ್ಟು ನಡೆದಾಟಿ ಜಯಮ್ಮ ಆಚೆ ಬಂದಿದ್ದಾರೆ. 8 ಮಕ್ಕಳನ್ನು ಕಾಪಾಡಲು ಅವರು ಮೂರು ಬಾರಿ ಮನೆಗೆ ಹೋಗಿ ಬಂದು ನೀರು ತುಂಬಿದ ರಸ್ತೆಯಲ್ಲಿ ದಾಟಬೇಕಾಯಿತು. ಅಷ್ಟು ಹೊತ್ತಿಗೆ ಸೊಂಟದವರೆಗೆ ನೀರು ತುಂಬಿತ್ತು. ನೀರಿನ ಮಟ್ಟ 5 ಅಡಿಗಳವರೆಗೆ ಏರಿಕೆಯಾಗಿತ್ತು. ಅಷ್ಟು ಹೊತ್ತಿಗೆ ದಿನಕೂಲಿ ಮಾಡುವ ಮಕ್ಕಳ ಪೋಷಕರು ವಾಪಸಾದರು.
ಆ ಸಂದರ್ಭದಲ್ಲಿ ಮಕ್ಕಳ ಪ್ರಾಣ ಕಾಪಾಡುವುದು ಮುಖ್ಯವಾಗಿತ್ತು. ಆ ವೇಳೆಗೆ ದೇವರು ನನಗೆ ಶಕ್ತಿ ಕೊಟ್ಟಿದ್ದ ಅನಿಸುತ್ತದೆ ಎನ್ನುತ್ತಾರೆ ಜಯಮ್ಮ. ವಿಧವೆಯಾಗಿರುವ ಜಯಮ್ಮ ಕುರುಬರಹಳ್ಳಿ 18ನೇ ಮುಖ್ಯರಸ್ತೆಯಲ್ಲಿ ಎರಡು ಪುಟ್ಟ ಮನೆಗಳನ್ನು ರಾಯಚೂರು ಮತ್ತು ಗಂಗಾವತಿಯ ವಲಸೆ ಕೂಲಿಕಾರರಿಗೆ ಬಾಡಿಗೆ ಕೊಟ್ಟಿದ್ದರು.
ಆ ಸಂದರ್ಭದಲ್ಲಿ ನನ್ನ ಮನೆಯೊಳಗೆ ನೀರು ತುಂಬಿದ ಬಗ್ಗೆ ಯೋಚನೆ ಮಾಡಲಿಲ್ಲ. ನನ್ನ ಮನೆಯೊಳಗಿನ ಪೀಠೋಪಕರಣಗಳು, ಆಹಾರ ವಸ್ತುಗಳು, ಬಟ್ಟೆಗಳು ನೀರಿನಲ್ಲಿ ಮುಳುಗಿ ಕೊಚ್ಚಿ ಹೋಗಿರಬಹುದು, ಅವುಗಳನ್ನು ಮತ್ತೆ ಪಡೆಯಬಹುದು. ಆದರೆ ನನ್ನ ಕಣ್ಣ ಮುಂದೆಯೇ ಅಪಾಯದಲ್ಲಿ ಸಿಲುಕಿದ್ದ ಮಕ್ಕಳನ್ನು ನೋಡಿ ಅವರ ಪ್ರಾಣವನ್ನು ಕಾಪಾಡದಿರಲು ಹೇಗೆ ಸಾಧ್ಯ ಎಂದು ಜಯಮ್ಮ ಕೇಳುತ್ತಾರೆ.
ಸೋಮವಾರದವರೆಗೆ ಮಳೆ: ಬೆಂಗಳೂರು ನಗರದಲ್ಲಿ ನಾಳೆಯವರೆಗೆ ಮಳೆ ಇರಬಹುದು ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಶುಕ್ರವಾರದ ಮಳೆಗೆ ಕುರುಬರಹಳ್ಳಿಯಲ್ಲಿ ಚರಂಡಿ ನೀರಿಗೆ ಕೊಚ್ಚಿ ಹೋದ ತಾಯಿ-ಮಗಳ ಶವ ಇನ್ನೂ ಪತ್ತೆಯಾಗಿಲ್ಲ.