ಪೊಲೀಸ್ ಅಧಿಕಾರಿಗಳೊಂದಿಗೆ ಪ್ರೇಮ್ ಕುಮಾರ್ (ಮಧ್ಯದಲ್ಲಿರುವವನು)
ಉಡುಪಿ: ಕಾಣೆಯಾದ ಮೂರು ವರ್ಷಗಳ ನಂತರ ಬಾಲಕ ತನ್ನ ಮಲತಂದೆಯ ಜೊತೆ ಮತ್ತೆ ಸೇರಿದ್ದಾನೆ. 13 ವರ್ಷದ ಪ್ರೇಮ್ ಕಿರಣ್ ಮುಂಬೈಯ ಕಲ್ಬದೇವಿಯಲ್ಲಿ ವಾಸಿಸುತ್ತಿರುವುದು ಪತ್ತೆ ಹಚ್ಚಿದ ಉಡುಪಿ ಪೊಲೀಸರು ಅವನನ್ನು ಉಡುಪಿಯಲ್ಲಿರುವ ಮಲ ತಂದೆ ಶ್ರೀಧರ್ ಕೆ. ಅಮೀನ್ ಬಳಿಗೆ ಕರೆತಂದಿದ್ದಾರೆ.
2015ರ ಜನವರಿ 31ರಂದು ಶ್ರೀಧರ್ ಅಮೀನ್ ಪ್ರೇಮ್ ಕಿರಣ್ ಕಾಣೆಯಾದ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಜನವರಿ 20ರಂದು ಮಣಿಪಾಲ ಮೈದಾನದಲ್ಲಿ ಆಟವಾಡಲು ಹೋಗಿದ್ದ ತನ್ನ ಮಗನನ್ನು ಯಾರೊ ಅಪಹರಿಸಿದ್ದಾರೆ ಎಂದು ದೂರು ಕೊಟ್ಟಿದ್ದರು. ಪೊಲೀಸರು ಶಂಕಿತ ಅಪಹರಣ ಕೇಸು ಎಂದು ಐಪಿಸಿ ಸೆಕ್ಷನ್ 363ರಡಿಯಲ್ಲಿ ಕೇಸು ದಾಖಲಿಸಿದ್ದರು.
ಪ್ರೇಮ್ ಕಿರಣ್ ಮಣಿಪಾಲದ ಹುಡ್ಕೊ ಕಾಲನಿಯ ವಾಸಿಯಾಗಿದ್ದನು. ಮಾನವ ಕಳ್ಳ ಸಾಗಣೆ ವಿರೋಧ ಘಟಕದ ಅಧಿಕಾರಿಯಾಗಿರುವ ಜಿಲ್ಲಾ ಅಪರಾಧ ವಿಭಾಗದ ಅಧಿಕಾರಿ ರತ್ನಕುಮಾರ್ ಜಿ, ಬಾಲಕ ಫೇಸ್ ಬುಕ್ ನಲ್ಲಿ ಸಕ್ರಿಯನಾಗಿರುವುದನ್ನು ಪತ್ತೆಹಚ್ಚಿದ್ದರು.
ಕಲಿಕೆಯಲ್ಲಿ ಆಸಕ್ತಿ ಹೊಂದಿರದ ಪ್ರೇಮ್ ಕುಮಾರ್ ತನ್ನಷ್ಟಕ್ಕೆ ತಾನು ವಾಸಿಸಲು ಇಚ್ಛಿಸುತ್ತಿದ್ದನು. ಹೀಗಾಗಿ ಹಣ ಸಂಪಾದಿಸಲೆಂದು ಮುಂಬೈಗೆ ಹೋಗಿದ್ದನು. ಪ್ರೇಮ್ ಕುಮಾರ್ ಫೇಸ್ ಬುಕ್ ಖಾತೆಯಲ್ಲಿ ತನ್ನ ಫೋಟೋವನ್ನು ಅಪ್ ಲೋಡ್ ಮಾಡಿದ್ದನ್ನು ಬೆಂಗಳೂರು ಪೊಲೀಸರು ಪತ್ತೆಹಚ್ಚಿದರು. ಈ ಸುಳಿವಿನ ಆಧಾರದ ಮೇಲೆ ಮಣಿಪಾಲ ಮತ್ತು ಬೆಂಗಳೂರು ಪೊಲೀಸರು ಒಟ್ಟಾಗಿ ಮುಂಬೈಯಲ್ಲಿದ್ದ ಹುಡುಗನನ್ನು ಹುಡುಕಲು ಹುಡುಕಾಟ ಆರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನನ್ನು ಪತ್ತೆ ಹಚ್ಚಿದ ಪೊಲೀಸರು ಮಣಿಪಾಲಕ್ಕೆ ಕರೆತಂದರು. ತಮ್ಮನ್ನು ಯಾರೂ ಅಪಹರಿಸಿಲ್ಲ, ತಾವು ಯಾವುದೇ ಸಮಾಜ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಬಾಲಕ ಹೇಳಿಕೆ ನೀಡಿದ್ದಾನೆ. ಮುಂಬೈನಲ್ಲಿ ಕ್ಯಾಂಟೀನೊಂದರಲ್ಲಿ ಕೆಲಸ ಮಾಡುತ್ತಿದ್ದೆ ಎಂದು ತಿಳಿಸಿದ್ದಾನೆ.