ಮೈಸೂರು: ಯಾವುದೇ ಕಾರಣಕ್ಕೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವನ್ನು (ಕೆಎಸ್ಒಯು) ಮುಚ್ಚುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಕೆಎಸ್ ಒಯು ಉದ್ಯೋಗಿಗಳಿಂದ ಮನವಿ ಸ್ವೀಕರಿಸಿ ಮಾತನಾಡಿದ ಸಿದ್ದರಾಮಯ್ಯ, ಮಾನ್ಯತೆ ರದ್ದುಪಡಿಸಿರುವುದು ಯುಜಿಸಿ. ಅದು ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಮಾನ್ಯತೆ ದೊರಕಿಸಿಕೊಡುವಂತೆ ಪತ್ರ ಬರೆದಿದ್ದೇನೆ. ಕೆಎಸ್‌ಒಯುವಿನಲ್ಲಿ ಸಾಕಷ್ಟು ಸಿಬ್ಬಂದಿ ಇದ್ದಾರೆ. ಅವರಿಗೆ ತೊಂದರೆ ಆಗಬಾರದು, ವಿದ್ಯಾರ್ಥಿಗಳ ಹಿತ ಕಾಯಬೇಕು ಎಂದು ಕೋರಿದ್ದೇನೆ. ಯಾರು ತಪ್ಪು ಮಾಡಿದ್ದಾರೊ ಅವರ ಮೇಲೆ ಕ್ರಮ ತೆಗೆದುಕೊಳ್ಳೋಣ ಎಂದೂ ಹೇಳಿದ್ದೇನೆ ಎಂದು ತಿಳಿಸಿದರು.
ಕೆಎಸ್‌ಒಯುವಿನಲ್ಲಿರುವ ಅನುದಾನವನ್ನು ಬೇರೆಡೆ ಏಕೆ ಬಳಸಿಕೊಳ್ಳಬಾರದು? ವಿಟಿಯುವಿನಲ್ಲಿ ಇದೇ ರೀತಿ ಇದ್ದ ರು. 450 ಕೋಟಿ ಅನುದಾನವನ್ನು ಬಳಸಿಕೊಳ್ಳಲಿಲ್ಲ ಎಂದು ವಾಣಿಜ್ಯ ತೆರಿಗೆ ಇಲಾಖೆಯು ವಾಪಸು ತೆಗೆದುಕೊಂಡಿತು. ಇಲ್ಲೂ ಹಾಗೆಯೇ ಆಗಬೇಕೇನು? ಬೇರೆ ವಿ.ವಿಗಳ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಂಡರೆ ತಪ್ಪೇನು ಎಂದು ಪ್ರಶ್ನಿಸಿದರು.