ಬೆಂಗಳೂರು: ಅಂತರಾಷ್ಟ್ರೀಯ ಗ್ರಾಹಕರಿಗೆ 12.5 ಕೋಟಿ ರೂ. ವಂಚನೆ, ಇಬ್ಬರು ಡೇಟಾ ನಿರ್ವಾಹಕರ ಬಂಧನ
ಬೆಂಗಳೂರು: ಕೇವಲ ಎರಡು ತಿಂಗಳಿನಲ್ಲಿ ಇಬ್ಬರು ಡಾಟಾ ಆಪರೇಟರ್ ಗಳು ಕೋಟ್ಯಾಧೀಶ್ವರರಾಗಿದ್ದಲ್ಲದೆ ನಾಲ್ಕಂತಸ್ತಿನ ಕಟ್ಟಡ, ಚಿನ್ನದ ಖರೀದಿ ನಡೆಸಿದ್ದರು. ಆದರೆ ಅಷ್ಟೇ ಶೀಘ್ರದಲ್ಲಿ ಅವರು ಕಾನೂನಿನ ಕಪಿಮುಷ್ಠಿಯಲ್ಲಿ ಸಿಲುಕಿದ್ದರು! ಮಾರಥ್ ಹಳ್ಳಿ ಪೊಲೀಸರು ಅಂತಾರಾಷ್ಟ್ರೀಯ ಬ್ಯಾಂಕ್ ದರೋಡೆ ಆರೋಪದಲ್ಲಿ ಈ ಇಬ್ಬರನ್ನು ಬಂಧಿಸಿದ್ದಾರೆ.
ಜೆಪಿ ಮೊರ್ಗಾನ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಬೆಳ್ಳಂದೂರಿನ ನಿವಾಸಿ ಸುರೇಶ್ (28) ಮತ್ತು ದೊಡ್ಡ ಗುಬ್ಬಿ ನಿವಾಸಿ ಮಾರುತಿ (22) ಬಂಧಿತರಾಗಿದ್ದಾರೆ. ಅಮೆರಿಕ ಮೂಲದ ಗ್ರಾಹಕರಿಂದ 12.15 ಕೋಟಿ ವಂಚಿಸಿದ ಪ್ರಕರಣದಲ್ಲಿ ಇವರನ್ನು ಬಂಧಿಸಲಾಗಿದೆ. ಅವರು ಡೇಟಾ ನಿರ್ವಾಹಕರಾಗಿರುವ ಕಾರಣ, ಅವರು ಗ್ರಾಹಕರಿಗೆ ವರ್ಗಾವಣೆಯಾಧ ಹಣದ ಖಾತೆಗೆ ಪ್ರವೇಶಿಸಬಹುದಾಗಿತ್ತು.
ಆಗಸ್ಟ್ 24 ರಂದು ಅಮೆರಿಕಾ ಮೂಲದ ವ್ಯಕ್ತಿಯ ಖಾತೆಯಿಂದ ಇನ್ನೊಂದು ಕಾತೆಗೆ ಹಣ ವರ್ಗಾವಣೆ ಆಗಿರುವುದಾಗಿ ಪೋಲೀಸರು ತಿಳಿಸಿದ್ದಾರೆ. ಅಂದು ಮಾರುತಿ, ಸುರೇಶ್ ಖಾತೆಗೆ ಹಣವನ್ನು ವರ್ಗಾಯಿಸಿದ್ದಾನೆ. ಅಂದಿನಿಂದಲೂ ಆರೋಪಿಗಳೆರಡೂ ಕಛೇರಿಗೆ ತೆರಳಿರಲಿಲ್ಲ., ಅವರುಗಳು ತಮ್ಮ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದರೆಂದು ಪೋಲೀಸರು ಹೇಳಿದ್ದಾರೆ.
ಸೆಪ್ಟೆಂಬರ್ 15 ರಂದು ಅಮೇರಿಕಾ ಮೂಲದ ಗ್ರಾಹಕ ಬ್ಯಾಂಕ್ ಅಧಿಕಾರಿಗಳಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಸಂಸ್ಥೆಯು ಆಂತರಿಕ ತನಿಖೆ ನಡೆಸಿ ಹಣ ಬೇರೆ ಖಾತೆಗೆ ವರ್ಗಾವಣೆ ಆಗಿರುವುದನ್ನು ಕಂಡುಕೊಂಡಿತು. ಸೆಪ್ಟೆಂಬರ್ 20 ರಂದು, ಸಂಸ್ಥೆಯು ಮಾರಥ್ ಹಳ್ಳಿ ಪೊಲೀಸರಿಗೆ ದೂರು ಸಲ್ಲಿಸಿತು. ಮಾರಥ್ ಹಳ್ಳಿ ಎಸ್ಐ ನಾಗರಾಜು ಎಂ ನೇತೃತ್ವದ ಪೊಲೀಸ್ ತಂಡವು 2013 ರಲ್ಲಿ ಸಂಸ್ಥೆಗೆ ಸೇರಿದ್ದ ಮಾರುತಿ ಮತ್ತು ಸುರೇಶ್ ರನ್ನು ಅಪರಾಧಿಗಳೆಂದು ಗುರುತಿಸಿದೆ.
ಮಾರುತಿ, ರಾಮಚಂದ್ರಪ್ಪ ಎನ್ನುವ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ತಯಾರಿಸುತ್ತಿದ್ದ. ಆದರೆ ಸಂಸ್ಥೆಯಲ್ಲಿ ಯಾರೂ ಅದರ ಬಗ್ಗೆ ತಿಳಿದಿರಲಿಲ್ಲ ಎಂದು ಎಸ್ಐ ಹೇಳಿದ್ದಾರೆ.
ನಗರದಲ್ಲಿ ಇಂತಹಾ ಪ್ರಕರಣ ಇದೇ ಮೊದಲಲ್ಲ, ಜನವರಿ 2016 ರಲ್ಲಿ, ಆಕ್ಸಿಸ್ ಬ್ಯಾಂಕ್ ನ ಡೆಪ್ಯುಟಿ ಮ್ಯಾನೇಜರ್ ಸೇರಿದಂತೆ ತೆಲಂಗಾಣದ ಏಳು ಜನರನ್ನು ಸೈಬರ್ ಅಪರಾಧ ದಳ ಪೊಲೀಸರು ಬಂಧಿಸಿದ್ದರು. ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಗಳನ್ನು ಬಳಸಿ ಹಣವನ್ನು ಕದಿಯುವ ಮೂಲಕ ಜನರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತು.