ಬಳ್ಳಾರಿ: ವಿಶ್ವ ವಿಖ್ಯಾತ ಪ್ರವಾಸಿ ತಾಣ ಹಂಪಿಯನ್ನು ದತ್ತು ಪಡೆದುಕೊಳ್ಳಲು ಆನ್ ಲೈನ್ ಪ್ರವಾಸಿ ತಾಣ ಯಾತ್ರಾ ಡಾಟ್ ಕಾಂ ಆಸಕ್ತಿ ತೋರಿದೆ. ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಪ್ರಾರಂಭಿಸಿದ ಪಾರಂಪರಿಕ ತಾಣ ದತ್ತು ಅಭಿಯಾನ ಅಂಗವಾಗಿ ಆನ್ ಲೈನ್ ವೆಬ್ ತಾಣ ಯಾತ್ರಾ ಡಾಟ್ ಕಾಂ ಹಂಪಿಯನ್ನು ದತ್ತು ಪಡೆಯಲು ಅರ್ಜಿ ಸಲ್ಲಿಸಿದೆ.
ಈ ದತ್ತು ಪ್ರಕ್ರಿಯೆಯಡಿಯಲ್ಲಿ ಮೊದಲಿಗೆ ಪಾರಂಪರಿಕ ತಾಣಗಳ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಹೊಣೆಯನ್ನು ನೀದಲಾಗುತ್ತದೆ. ಆ ನಂತರದಲ್ಲಿ ಯಾವ ಬಗೆಯ ಅಭಿವೃದ್ಧಿ ಕಾರ್ಯ ಕೈಗೊಳ್ಳಬಹುದು ಎನ್ನುವುದನ್ನು ಪರಿಶೀಲಿಸಲಾಗುತ್ತದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಕಾರ್ಯದರ್ಶಿ ರಶ್ಮಿ ವರ್ಮಾ ತಿಳಿಸಿದ್ದಾರೆ.
ಪ್ರವಾಸೋದ್ಯಮ ಸಚಿವಾಲಯವು ಪರಂಪರೆ ತಾಣಗಳನ್ನು ದತ್ತು ಪಡೆಯಿರಿ ಎಂಬ ವಿಶೇಷ ಯೋಜನೆಯಡಿ ದೇಶದ 14 ಪರಂಪರೆ ತಾಣಗಳನ್ನು ಖಾಸಗಿಯವರು ದತ್ತು ಪಡೆಯುವಂತೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಯಾತ್ರಾ ಡಾಟ್ ಕಾಂ ಹಂಪಿಯನ್ನು ದತ್ತು ಪಡೆಯುವ ಆಸಕ್ತಿ ತೋರಿಸಿದೆ.
ದತ್ತು ಪ್ರಕ್ರಿಯೆಯಡಿಯಲ್ಲಿ ಬರುವ ದೇಶದ ಇತರೆ ಸ್ಮಾರಕಗಳ ವಿವರ ಹೀಗಿದೆ- ದೆಹಲಿಯ ಕುತುಬ್ ಮಿನಾರ್, ಜಂತರ್-ಮಂತರ್, ಪುರಾನ ಕ್ವಿಲಾ, ಸಫ್ದರ್‍ಜಂಗ್ ಸಮಾಧಿ ಮತ್ತು ಅಗರ್‍ಸೇನ್ ಕಿ ಬವೋಲಿ, ಆಗ್ರಾದ ತಾಜ್ ಮಹಲ್, ಒಡಿಶಾದ ಸೂರ್ಯ ದೇವಾಲಯ, ರತ್ನಗಿರಿ ಸ್ಮಾರಕ ಮತ್ತು ರಾಜರಾಣಿ ದೇವಾಲಯ, ಲೆಹ್ ಅರಮನೆ, ಅಜಂತಾ-ಎಲ್ಲೋರಾ ಗುಹೆಗಳು, ಕೊಚ್ಚಿಯ ಮತ್ತಂಚೇರಿ ಅರಮನೆ, ಗಂಗೋತ್ರಿ ದೇವಾಲಯ ಮತ್ತು ಗೋಮುಖ, ಲಡಾಕ್‍ನ ಸ್ಪಾಕ್ ಕಂಗ್ರಿ.
ಈ ಎಲ್ಲಾ ಸ್ಮಾರಕಗಳ ನಿರ್ವಹಣೆಗಾಗಿ ಕೇಂದ್ರ ಪ್ರವಾಸೋದ್ಯಮ ಇಲಾಖೆ ಏಳು ಖಾಸಗಿ ಸಂಸ್ಥೆಗಳಿಗೆ ಪ್ರಸ್ತಾವನೆ ಸಲ್ಲಿಸಿತ್ತು.
ಹಂಪಿ ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿದೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಸ್ಥಳವೀಗ ವಿಶ್ವ ಪರಂಪರೆ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.