ಮಂಗಳೂರು: ಗಂಟಲಲ್ಲಿ ಚಕ್ಕುಲಿ ಸಿಕ್ಕಿಕೊಂಡ ಪರಿಣಾಮ ಒಂದು ವರ್ಷದ ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ನಡೆದಿದೆ.ಗೇರುಕಟ್ಟೆಯ ನಿವಾಸಿ ವಿಠಲ್ ಎಂಬುವವರ ಪುತ್ರ ಆರುಷ್ ಸಾವಿಗೀಡಾಗಿರುವ ದುರ್ದೈವಿ.
ಮಗುವಿನ 1 ವರ್ಷದ ಹುಟ್ಟುಹಬ್ಬ ನಡೆದು ಕೇವಲ 2 ದಿನಗಳಾಗಿತ್ತು. ಮಂಗಳವಾರ ಬೆಳಗ್ಗೆ ಕುಟುಂಬದ ಸದಸ್ಯರೊಬ್ಬರು ಮಗುವಿನ ಕೈಯ್ಯಲ್ಲಿ ಚಕ್ಕುಲಿ ಚೂರೊಂದನ್ನು ನೀಡಿದ್ದಾರೆ. ಈ ಮೊದಲು ಕೂಡ ಆರುಷ್ ಚಕ್ಕುಲಿಯನ್ನು ಅಗಿದು ತಿನ್ನುತ್ತಿದ್ದ. ಆದರೆ ಈ ಬಾರಿ ಚಕ್ಕುಲಿಯನ್ನು ನುಂಗಲು ಯತ್ನಿಸಿದ್ದಾನೆ. ದುರಾದೃಷ್ಟವಶಾತ್ ಚಕ್ಕುಲಿ ತುಂಡು ಆತನ ಏರ್ ಪೈಪ್ ಒಳಗೆ ಹೋಗಿ ಉಸಿರಾಡಲು ತೊಂದರೆಯಾಗಿದೆ.
ಇದನ್ನು ನೋಡಿದ ಕುಟುಂಬಸ್ಥರು ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದೆ.