ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ
ಕಲಬುರಗಿ: ರಾಜ್ಯಾದ್ಯಂತ 62ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ಚಾಲ್ತಿಯಲ್ಲಿರುವಂತೆಯೇ ಅತ್ತ ಕಲಬುರಗಿಯಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಕೂಗು ಎದ್ದಿದ್ದು, ಪ್ರತ್ಯೇಕ 'ಕಲ್ಯಾಣ ಕರ್ನಾಟಕ'ಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಕರ್ನಾಟಕ ಏಕೀಕರಣದ ಸಂಕೇತವಾಗಿರುವ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲೇ ಹೈದರಾಬಾದ್ ಕರ್ನಾಟಕ ಪ್ರಾಂತ್ಯದ ಕಲಬುರಗಿಯಲ್ಲಿ ಪ್ರತ್ಯೇಕತೆಯ ಕೂಗು ಕೇಳಿಬಂದಿದ್ದು, ಕಲಬುರಗಿಯ ಸರ್ದಾರ್ ವಲ್ಲಭಬಾಯಿ ವೃತ್ತದ ಬಳಿ ಪ್ರತ್ಯೇಕ 'ಕಲ್ಯಾಣ ಕರ್ನಾಟಕ'ಕ್ಕಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಇದೇ ವೇಳೆ ಧ್ವಜಾರೋಹಣಕ್ಕೆ ತೆರಳುತ್ತಿದ್ದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಕಾರ್ಯಕರ್ತರನ್ನು ಪೊಲೀಸರು ತಡೆದು ಬಂಧಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ ಪೊಲೀಸರು ಬಂಧಿಸಲು ಮುಂದಾಗುತ್ತಿದ್ದಂತೆಯೇ ಹೋರಾಟಗಾರರು ಬಂಧನಕ್ಕೆ ಬೆದರಿ ಓಡಿ ಹೋಗುವ ಮೂಲಕ ನಗೆಪಾಟಲಿಗೀಡಾದರು. ಹೈದ್ರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಕಾರ್ಯಕರ್ತರೂ ಸಹ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಪ್ರತ್ಯೇಕ ಹೋರಾಟ ನಡೆಸಿದರು. ಈ ಕಾರ್ಯಕರ್ತರನ್ನೂ ಸಹ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.