ರಾಜ್ಯ

ಬೆಂಗಳೂರು: ಒಳ ಚರಂಡಿ ಕಾಮಗಾರಿಗೆ 300 ಕೋಟಿ ರೂ.ಮೀಸಲು

Sumana Upadhyaya
ಬೆಂಗಳೂರು: ಕಳೆದ 15-20 ದಿನಗಳಿಂದ ನಗರದಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಅಲ್ಲಲ್ಲಿ ನೀರು ತುಂಬಿ ತುಳುಕುತ್ತಿದೆ. ಕೆಲವೆಡೆ ಹಾನಿ ಸಂಭವಿಸಿದೆ. ಕೊನೆಗೂ ಕಾರ್ಯಪ್ರವೃತ್ತವಾಗಿರುವ ರಾಜ್ಯ ಸರ್ಕಾರ ಪ್ರವಾಹ ನೀರನ್ನು ನಿಯಂತ್ರಿಸಲು ಚರಂಡಿ ಕಾರ್ಯ ಮತ್ತು ಅಭಿವೃದ್ಧಿಗೆ ಸುಮಾರು 300 ಕೋಟಿ ರೂಪಾಯಿ ಘೋಷಿಸಿದೆ.
ನೆರೆ ಪ್ರವಾಹವನ್ನು ತಡೆಗಟ್ಟುವ ಚರಂಡಿ ಕೆಲವೇ ಸಮಯಗಳಲ್ಲಿ ಸುಮಾರು 80 ಮಿಲಿಮೀಟರ್ ನೀರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಮೊನ್ನೆ ಆಗಸ್ಟ್ 14ರಂದು ಬೆಂಗಳೂರು ನಗರದಲ್ಲಿ ಸತತ ಮೂರು ಗಂಟೆಗಳ ಕಾಲ ಮಳೆ ಸುರಿದಿದ್ದರಿಂದ 180 ಮಿಲಿ ಮೀಟರ್ ನಷ್ಟು ಮಳೆ ಬಿದ್ದಿದೆ. ಆಗಸ್ಟ್ ತಿಂಗಳಲ್ಲಿ ನಗರದಲ್ಲಿ 249.5 ಮಿಲಿ ಮೀಟರ್ ಮಳೆ ಸುರಿದಿದೆ. ನಿರೀಕ್ಷಿತ ಮಳೆ 136 ಮಿಲಿ ಮೀಟರ್ ನಷ್ಟಾಗಿತ್ತು.
ಈಗಾಗಲೇ 800 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು ಅಧಿಕ ಮಳೆಯಾದರೆ ಅಲ್ಲಲ್ಲಿ ನೀರು ನಿಲ್ಲುವ ಕಾರಣ ಬಿಬಿಎಂಪಿಯು ಹೆಚ್ಚುವರಿ ಕೆಲಸವನ್ನು ಘೋಷಿಸಿದೆ. ಕಾಮಗಾರಿಯಲ್ಲಿ ಹೊಸ ಒಳ ಚರಂಡಿಗಳ ನಿರ್ಮಾಣ, ಹಳೆಯ ಚರಂಡಿಗಳನ್ನು ಬದಲಾಯಿಸುವ ಕಾಮಗಾರಿಗಳನ್ನು ಹೊಂದಲಾಗಿದೆ.ಈ ಯೋಜನೆ ಕುರಿತು ಇಂದು ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಲಾಗುತ್ತದೆ. ಇದು ಸಣ್ಣ ಕಾಮಗಾರಿಯಲ್ಲ. ವಿಪರೀತ ಮಳೆ ಬಂದಾಗ ಬೆಂಗಳೂರು ನಗರದಲ್ಲಿ ಅಧಿಕ ಹಾನಿಯುಂಟಾಗದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ ಎನ್ನುತ್ತಾರೆ ಸಚಿವರು.
ಮುಂದಿನ 3 ದಿನಗಳ ಕಾಲ ಭಾರೀ ಮಳೆ: ಬೆಂಗಳೂರಿನಲ್ಲಿ ಮುಂದಿನ 3 ದಿನಗಳ ಕಾಲ ಸತತ ಮಳೆ ಸುರಿಯುವ ಮುನ್ಸೂಚನೆಯಿರುವುದರಿಂದ ಮ್ಯಾನ್ ಹೋಲ್ ಗಳು ಮತ್ತು ಸ್ಲ್ಯಾಬ್ ಗಳು ನೀರಿನಲ್ಲಿ ಮುಳುಗಡೆಯಾಗುವುದರಿಂದ ದ್ವಿಚಕ್ರ ವಾಹನ ಸವಾರರು ವಿಶೇಷವಾಗಿ ಜಾಗ್ರತೆ ವಹಿಸಬೇಕು. ಇನ್ನೂ ನಾಲ್ಕು ಚರಂಡಿ ನೀರು ಸಂಸ್ಕರಣಾ ಘಟಕಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಅದು 2020ರ ವೇಳೆಗೆ ಪೂರ್ಣವಾಗಲಿದೆ.
ನಗರದಾದ್ಯಂತ ಚರಂಡಿಗಳಲ್ಲಿ ಹರಿಯುವ ನೀರನ್ನು ಸಂಸ್ಕರಣೆ ಮಾಡಲಾಗುವುದು ಎಂದು ತಿಳಿಸಿದರು.
SCROLL FOR NEXT