ಗೌರಿ ಲಂಕೇಶ್ ಹತ್ಯೆ: ತನಿಖೆ ಚುರುಕು, ಘಟನಾ ಸ್ಥಳದಿಂದ ಸಿಸಿಟಿವಿ ದೃಶ್ಯಾವಳಿ ವಶಕ್ಕೆ!
ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ.
ಗೌರಿ ಲಂಕೇಶ್ ನಿವಾಸ ಸೇರಿದಂತೆ ಘಟನೆ ನಡೆದ ರಾಜರಾಜೇಶ್ವರಿ ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಂತೆಯೇ ಘಟನೆ ನಡೆದ ಸಂದರ್ಭದದಲ್ಲಿ ಸ್ಥಳದಲ್ಲಿ ಇದ್ದರು ಎನ್ನಲಾಗುತ್ತಿರುವ ಸುಮಾರು 10 ಮಂದಿ ಪ್ರತ್ಯಕ್ಷದರ್ಶಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದೇ ವೇಳೆ ಗೌರಿ ಲಂಕೇಶ್ ಅವರ ನಿವಾಸದ ಬಳಿ ಇರುವ ಮೊಬೈಲ್ ಟವರ್ ಗಳ ದತ್ತಾಂಶಗಳ ಸಂಗ್ರಹಕ್ಕೂ ಪೊಲೀಸರು ಮುಂದಾಗಿದ್ದು, ಗೌರಿ ಲಂಕೇಶ್ ಹತ್ಯೆಯಾಗುವ ಮುನ್ನ ಹಾಗೂ ಹತ್ಯೆಯಾದ ಬಳಿಕ ದುಷ್ಕರ್ಮಿಗಳು ಮಾಡಿರಬಹುದಾದ ಕರೆಗಳ ದತ್ತಾಂಶಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಪ್ರಮುಖವಾಗಿ ಗೌರಿ ಲಂಕೇಶ್ ಅವರ ನಿವಾಸ ಇರುವ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಪ್ರದೇಶದ ಸುತ್ತಮುತ್ತಲ ಟವರ್ ಗಳ ದತ್ತಾಂಶವನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ದುಷ್ಕರ್ಮಿಗಳ ಪತ್ತೆಗಾಗಿ 3 ತಂಡ ರಚನೆ
ಇದೇ ವೇಳೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ದುಷ್ಕರ್ಮಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಈ ಮೂರು ತಂಡ ಪ್ರಕರಣದ ಕೂಲಂಕುಷ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಈ ಮೂರು ತಂಡಗಳು ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಮೊಬೈಲ್ ಟವರ್ ದತ್ತಾಂಶಗಳನ್ನು ಕಲೆ ಹಾಕುತ್ತಿದ್ದಾರೆ. ಬೆಂಗಳೂರಿನ ಗಾಂಧಿನಗರದಲ್ಲಿರುವ ಗೌರಿ ಲಂಕೇಶ್ ಅವರ ಸ್ನೇಹಿತೆಯ ಮನೆಯಿಂದ ಹಿಡಿದು ರಾಜರಾಜೇಶ್ವರಿ ನಗರದ ವರೆಗಿನ ಮೊಬೈಲ್ ಟವರ್ ದತ್ತಾಂಶಗಳನ್ನು ಕಲೆಹಾಕಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ ಪೊಲೀಸರು 1 ಸಾವಿರಕ್ಕೂ ಅಧಿಕ ದೂರವಾಣಿ ಕರೆಗಳ ದತ್ತಾಂಶಗಳನ್ನು ಪೊಲೀಸರು ಕಲೆಹಾಕಿದ್ದು. ಈ ಪೈಕಿ ಹಲವು ಕರೆಗಳು ಶಂಕಾಸ್ಪದ ಕರೆಗಳು ಎಂದು ಪೊಲೀಸರು ಗುರುತಿಸಿದ್ದಾರೆ ಎನ್ನಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.