ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಸಾವಿನ ಕುರಿತಂತೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಫೇಸ್ ಬುಕ್ ಖಾತೆದಾರ ಕ್ಷಮೆಯಾಚಿಸಿದ್ದು, ಪ್ರಕರಣ ಸಂಬಂಧ ಯಾವುದೇ ವಿಚಾರಣೆಗೂ ತಾನು ಸಿದ್ಧ ಎಂದು ಹೇಳಿದ್ದಾರೆ.
ನಿನ್ನೆ ತಮ್ಮದೇ ನಿವಾಸದ ಬಳಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಗೌರಿ ಲಂಕೇಶ್ ಅವರ ಸಾವಿನ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ "ಮಲ್ಲಿ ಅರ್ಜುನ್" ಎಂಬ ಖಾತೆದಾರ, "ತಾಳ್ಮೆಗೂ ಒಂದು ಮಿತಿ ಇದೆ...ಒಂದು ಗಂಜಿ ಗಿರಾಕಿ ಹೆಣ ಬಿತ್ತು...ಗೌರಿ ಲಂಕೇಶ್ ಮಟ್ಯಾಶ್" ಎಂದು ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಖಾತೆದಾರ ಮಲ್ಲಿ ಅರ್ಜುನ್ ಕ್ಷಮೆ ಯಾಚಿಸಿದ್ದು, "ಹಿಂದೆ ಹಾಕಿರೋ ಪೋಸ್ಟ್ ನಿಂದ ಯಾರ್ಗಾದ್ರು ಬೇಜಾರಾಗಿದ್ರೆ ದಯವಿಟ್ಟು ಕ್ಷಮೆಯಿರಲಿ ನನ್ನ ಮೆಲೆ ಯಾವುದೇ ದೂರು ದಾಖಸಿದರೂ ಕೂಡ ನಾನು ವಿಚಾರಣೆಗೆ ಬರಲು ಸಿದ್ದ" ಎಂದು ಮತ್ತೊಂದು ಪೋಸ್ಟ್ ಹಾಕಿದ್ದಾರೆ.
ಇದೇ ವೇಳೆ ತಮ್ಮ ಬಂಧನದ ಬಗ್ಗೆ ಮಾಧ್ಯಮಗಳು ಬಿತ್ತರಿಸುತ್ತಿರುವ ಸುದ್ದಿಗಳು ಸುಳ್ಳು ಎಂದು ಹೇಳಿರುವ ಮಲ್ಲಿ ಅರ್ಜುನ್, ನನ್ನ ಬಂಧನವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮತ್ತೊಂದು ಪೋಸ್ಟ್ ಹಾಕಿರುವ ಅವರು, "ನನ್ನ ಬಂಧನದ ಬಗ್ಗೆ ವದಂತಿ ಹಬ್ಬಿಸಬೇಡಿ ನನ್ನನ್ನೂ ಯಾರು ಭಂದಿಸಿಲ್ಲ ನಾನ್ ಎನ್ ತಪ್ಪು ಮಾಡಿದಿನಿ ಅಂತ ನನ್ನ ಭಂದಿಸ್ತಾರೆ ಪೋಸ್ಟ್ ಹಾಕಿದ್ದು ನನ್ನ ತಪ್ಪು ನಾನು ಕ್ಷಮೆ ಕೂಡ ಕೇಳಿದ್ದೆನೆ ಮಾದ್ಯಗಳಲ್ಲಿ ಬರುತ್ತಿರುವ ವಿಷಯ ಎಲ್ಲವೂ ಸುಳ್ಳು ದಯವಿಟ್ಟು ಯಾರು ಇದನ್ನ ನಂಬಬೇಡಿ ಪೋಸ್ಟ್ ಹಾಕಿದ್ದಕ್ಕೆ ಮತ್ತೆ ಮತ್ತೆ ಕ್ಷಮೆ ಕೇಳ್ತಿನಿ ದಯವಿಟ್ಟು ಇದನ್ನ ಇಲ್ಲಿಗೆ ನಿಲ್ಲಿಸಿ" ಎಂದು ಮನವಿ ಮಾಡಿದ್ದಾರೆ.