ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ಸಿಎಂ ಸಿದ್ದರಾಮಯ್ಯ ಕಟು ಶಬ್ದಗಳಿಂದ ಟೀಕಿಸಿದ್ದು, ಇಂತಹ ಹೀನಕೃತ್ಯವನ್ನು ಎಸಗಿದವರನ್ನು ಪತ್ತೆ ಹಚ್ಚಿ ಖಂಡಿತಾ ಕಾನೂನಾತ್ಮಕವಾಗಿ ಶಿಕ್ಷಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ತಮ್ಮ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, " ಕರ್ನಾಟಕದ ಪ್ರಗತಿಪರ ಚಿಂತನೆಯ ಹೆಮ್ಮೆಯಾಗಿದ್ದ ಧೀಮಂತ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಪೈಶಾಚಿಕವಾಗಿ ಹತ್ಯೆಗೈದಿರುವುದನ್ನು ಕಟು ಶಬ್ಧಗಳಲ್ಲಿ ಖಂಡಿಸುತ್ತೇನೆ. ಪದಗಳಿಗೂ ನಿಲುಕದ ಇಂಥ ಹೀನಕೃತ್ಯ ಎಸೆಗಿದವರನ್ನು, ಇದರ ಹಿಂದಿನ ದುಷ್ಟಶಕ್ತಿಗಳನ್ನು ಪತ್ತೆಹಚ್ಚಿ ಶಿಕ್ಷಿಸಲು ಸರ್ವ ಪ್ರಯತ್ನಗಳನ್ನೂ ಮಾಡಲಾಗುವುದು" ಎಂದು ಹೇಳಿದ್ದಾರೆ.
ಅಂತೆಯೇ ಲಂಕೇಶ್ ಹತ್ಯೆ ಸಂಬಂಧ ಡಿಜಿಪಿ ಅವರೊಂದಿಗೆ ಚರ್ಚೆ ನಡೆಸಿದ್ದು, ಪ್ರಕರಣದ ಕೂಲಂಕುಷ ತನಿಖೆ ನಡೆಸಿ ಶೀಘ್ರ ದುಷ್ಕರ್ಮಿಗಳನ್ನು ಬಂಧಿಸುವಂತೆ ಸೂಚನೆ ನೀಡಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂಗೆ ತನಿಖೆಯ ಕ್ಷಣಕ್ಷಣದ ಮಾಹಿತಿ
ಇನ್ನು ಭಾರಿ ಆಕ್ರೋಶಕ್ಕೆ ಕಾರಣವಾಗಿರುವ ಗೌರಿ ಲಂಕೇಶ್ ಅವರ ಹತ್ಯೆ ಸಂಬಂದ ತೀವ್ರ ಒತ್ತಡಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ, ಪೊಲೀಸ್ ತನಿಖೆಯ ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯುತ್ತಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೆ ಗುಪ್ತಚರ ಇಲಾಖೆ ಅಧಿಕಾರಿಗಳಿಂದಲೂ ಸಿಎಂ ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರು ಕೊಲೆಯಾಗಿದ್ದು ಆಘಾತವನ್ನುಂಟುಮಾಡಿದೆ ಎಂದು ಹೇಳಿರುವ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ತಾವು ಗೃಹ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಇತರರೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ.
ಇದೊಂದು ಆಘಾತಕಾರಿ ಘಟನೆ. ಗೌರಿಯವರು ಯಾವಾಗಲೂ ಜಾತ್ಯತೀತ ತತ್ವಗಳ ಮೇಲೆ ನಂಬಿಕೆಯಿಟ್ಟಿದ್ದರು. ಅವರು ಹತ್ಯೆಗೀಡಾಗಿರುವುದು ನಿಜಕ್ಕೂ ಬೇಸರದ ಸಂಗತಿ. ಇದರ ಹಿಂದೆ ಯಾವುದೋ ಪಿತೂರಿ ನಡೆದಿರಬೇಕು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂದು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.