ಬೆಂಗಳೂರು: ದುಷ್ಕರ್ಮಿಗಳ ಗುಂಡೇಟಿಗೆ ಎದೆಯೊಡ್ಡು ಸಾವನ್ನಪ್ಪಿದ್ದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ.
ಗೌರಿ ಲಂಕೇಶ್ ಅವರ ಆಸೆಯಂತೆಯೇ ಅವರ ಕಣ್ಣುಗಳನ್ನು ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ದಾನ ಮಾಡಲಾಗಿದೆ. ಗೌರಿ ಲಂಕೇಶ್ ಅವರ ಸಹೋದರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ನೇತೃತ್ವದಲ್ಲಿ ಗೌರಿ ಲಂಕೇಶ್ ಅವರ ಕಣ್ಣುಗಳನ್ನು ಮಿಂಟೋ ಆಸ್ಪತ್ರೆಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಇಂದ್ರಜಿತ್ ಲಂಕೇಶ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, "ಗೌರಿ ಲಂಕೇಶ್ ಅವರ ಆಸೆಯಂತೆ ಅವರ ಎರಡೂ ಕಣ್ಣುಗಳನ್ನು ದಾನ ಮಾಡಲಾಗಿದೆ ಎಂದು ಹೇಳಿದ್ದಾರೆ.
ಅಲ್ಲದೆ ನೇತ್ರದಾನ ಕುರಿತಂತೆ ಮಾಧ್ಯಮಗಳಿಗೆ ನೇತ್ರದಾನ ಪ್ರಮಾಣಪತ್ರವನ್ನೂ ಪ್ರದರ್ಶನ ಮಾಡಿದ್ದಾರೆ. ಈ ವೇಳೆ ಹತ್ಯೆ ಕುರಿತಂತೆ ಮಾತನಾಡಿದ ಇಂದ್ರಜಿತ್ ಲಂಕೇಶ್ ಅವರು, ತಮ್ಮ ಸಹೋದರಿ ಗೌರಿ ಲಂಕೇಶ್ ಸಾವಿಗೆ ನ್ಯಾಯ ಸಿಗಬೇಕು. ಹತ್ಯೆ ನಡೆದಿರುವ ಬಗ್ಗೆ ಸೂಕ್ತ ತನಿಖೆ ನಡೆಸುವ ಭರವಸೆಯನ್ನು ಕಮಿಷನರ್ ನೀಡಿದ್ದಾರೆ ಎಂದು ಹೇಳಿದ್ದಾರೆ.