ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್ ಐಟಿ)ವನ್ನು ರಚಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಪ್ರಕರಣದ ತನಿಖೆಗಾಗಿ ಐಜಿ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಈ ಬಗ್ಗೆ ಡಿಜಿಪಿ ಮತ್ತು ಐಜಿಪಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಅಂತೆಯೇ ಗೃಹ ಸಚಿವರೊಂದಿಗೆ ಚರ್ಚೆ ಮಾಡಲಾಗಿದೆ. ಹೀಗಾಗಿ ಎಸ್ ಐಟಿ ತಂಡ ರಚನೆ ಮಾಡಲಾಗಿದ್ದು, ಈ ತಂಡಕ್ಕೆ ಸಂಪೂರ್ಣ ಸ್ವತಂತ್ರ ನೀಡಲಾಗಿದ್ದು, ತನಿಖೆಗಾಗಿ ಯಾವುದೇ ರೀತಿಯ ಕಾಲಮಿತಿ ನೀಡಿಲ್ಲ. ಅಂತೆಯೇ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ತಂಡಕ್ಕೆ ಇದೊಂದೇ ಪ್ರಕರಣದ ತನಿಖಾ ಜವಾಬ್ದಾರಿ ನೀಡಲಾಗುತ್ತದೆ. ತನಿಖೆಗಾಗಿ ಎಷ್ಟು ಬೇಕಾದರೂ ಸಿಬ್ಬಂದಿಗಳನ್ನು ಬಳಸಿಕೊಳ್ಳುವಂತೆ ಹೇಳಲಾಗಿದೆ ಎಂದು ಹೇಳಿದರು.
ಇದೇ ವೇಳೆ ಗೌರಿ ಲಂಕೇಶ್ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈ ಹಿಂದೆ ಸಾಕಷ್ಟು ಬಾರಿ ಗೌರಿ ಲಂಕೇಶ್ ಅವರು ನನ್ನನ್ನು ಭೇಟಿ ಮಾಡಿದ್ದರು. ಈಗ್ಗೆ ಒಂದು ವಾರದ ಹಿಂದೆಯೂ ಭೇಟಿ ಮಾಡಿದ್ದರು. ಆಗಲೂ ತಮಗೆ ಜೀವ ಬೆದರಿಕೆ ಇದೆ ಎಂಬ ವಿಚಾರದ ಬಗ್ಗೆ ಮಾತನಾಡಿರಲಿಲ್ಲ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಭದ್ರವಲಾಗಿದೆ. ಆದರೆ ಗೌರಿ ಲಂಕೇಶ್ ಹತ್ಯೆ ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಈ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗುವುದು ಕಷ್ಟಕರ. ಅಂತೆಯೇ ಪ್ರಸ್ತುತ ರಾಜ್ಯದಲ್ಲಿರುವ ಎಲ್ಲ ವಿಚಾರವಾದಿಗಳಿಗೆ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.