ಗೌರಿ ಲಂಕೇಶ್ ಮನೆಯಲ್ಲಿ ಎಸ್ಐಟಿ ಅಧಿಕಾರಿಗಳು
ಬೆಂಗಳೂರು: ಹಿರಿಯ ಪತ್ರಕರ್ತೆ, ಸಾಹಿತಿ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಆರಂಭಿಸಿದ ವಿಶೇಷ ತನಿಖಾ ತಂಡ(ಎಸ್ಐಟಿ)ದ ಅಧಿಕಾರಿಗಳು ಗುರುವಾರ ಅವರ ಕಚೇರಿ ಹಾಗೂ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಕಳೆದ ಮಂಗಳವಾರ ರಾತ್ರಿ ನಡೆದ ಪತ್ರಕರ್ತೆಯ ಹತ್ಯೆ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ನಿನ್ನೆ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಇಂದು ಎಸ್ ಐಟಿ ಅಧಿಕಾರಿಗಳು ಪ್ರಕರಣ ಸಂಬಂಧ ಸಿಐಡಿ ಕಚೇರಿಯಲ್ಲಿ ಸಭೆ ನಡೆಸುವ ಮೂಲಕ ತನಿಖೆ ಆರಂಭಿಸಿದ್ದು, ಸಭೆಯ ನಂತರ ಬಸವನಗುಡಿಯಲ್ಲಿರುವ ಗೌರಿ ಲಂಕೇಶ್ ಅವರ ಕಚೇರಿಗೆ ಇಬ್ಬರು ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಇನ್ನು ಮತ್ತೊಂದು ಎಸ್ಐಟಿ ಅಧಿಕಾರಿಗಳ ತಂಡ ಹಾಗೂ ಎಫ್ಎಸ್ಎಲ್ ಅಧಿಕಾರಿಗಳು ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ಲಂಕೇಶ್ ಅವರ ಮನೆಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯ ಬಳಿ ಬುಲೆಟ್ ಚೂರುಗಳು, ಮತ್ತಿತರ ವಸ್ತುಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪ್ರಕರಣದ ತನಿಖೆಗಾಗಿ ಐಜಿ ಬಿಕೆ ಸಿಂಗ್ ನೇತೃತ್ವದಲ್ಲಿ 21 ಅಧಿಕಾರಿಗಳ ವಿಶೇಷ ತಂಡ ರಚಿಸಲಾಗಿದೆ.
ಇನ್ನು ಪ್ರಕರಣದ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಕೋರಿರುವ ಎಸ್ಐಟಿ ತಂಡ, ಘಟನೆಗೆ ಸಂಬಂಧಿಸಿದಂತೆ ನಿಮ್ಮ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಅದನ್ನು 9480800202ಗೆ ಕರೆ ಮಾಡಿ ತಿಳಿಸಬಹುದು ಅಥವಾ sit.glankesh@ksp.gov.inಗೆ ಮೇಲ್ ಮಾಡಬಹುದು ಎಂದು ಹೇಳಿದೆ.