ಬಾಗಲಕೋಟೆ: ಕೆಎಸ್ಆರ್'ಟಿಸಿ ಬಸ್ ಹಾಗೂ ಕ್ರೂಸ್ ನಡುವೆ ಸಂಭವಿಸಿದ ಅಪಘಾತದಲ್ಲಿ 6 ಮಂದಿ ಸ್ಥಳದಲ್ಲಿಯೇ ದುರ್ಮರಣವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ವಿಜಯಪುರದಲಿಂದ ಬಾಗಲಕೋಟೆಗೆ ಬರುತ್ತಿದ್ದ ಕೆಎಸ್ಆರ್'ಟಿಸಿ ಬಸ್ ಹಾಗೂ ಮಹಾರಾಷ್ಟ್ರ ಮೂಲದ ಕ್ಸೂಸರ್ ವಾಹನಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕ್ರೂಸರ್ ನಜ್ಜುಗುಜ್ಜಾಗಿದೆ. ಅಪಘಾತ ಸಂಭವಿಸಿದ ಪರಿಣಾಮ ವಾಹನದಲ್ಲಿ ಪ್ರಯಾಣಿಸುತ್ತಿದ್ದ 6 ಮಂದಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ಮೃತರು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಾಡ ತಾಲೂಕಿನ ದಾರಪಾಳ ಗ್ರಾಮದವರಾಗಿದ್ದಾರೆಂದು ತಿಳಿದುಬಂದಿದೆ.
ಕ್ಸೂಸರ್ ವಾಹನದಲ್ಲಿ ಒಟ್ಟು 12 ಮಂದಿ ಪ್ರಯಾಣಿಕರಿದ್ದರು. ಘಟನೆಯಲ್ಲಿ ಇಬ್ಬರಿಗೆ ಗಂಭೀರವಾದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಸ್ತುತ ಸ್ಥಳಕ್ಕಾಗಮಿಸಿರುವ ಬೀಳಗಿ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.