ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರೆದಿದ್ದು, ಮಹಾಮಳೆಗೆ ರಾಜ್ಯದಲ್ಲಿ 10 ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯ ವರದಿಗಳ ಅನ್ವಯ ಮಳೆಯಿಂದಾಗಿ ಶುಕ್ರವಾರ ಒಂದೇ ದಿನ 10 ಮಂದಿ ಬಲಿಯಾಗಿದ್ದಾರೆ. ವಿಜಯಪುರದ ಇಂಡಿ ಹಾಗೂ ಜೇವೂರಿನಲ್ಲಿ ಮನೆಯ ಗೋಡೆ ಕುಸಿದಿದ್ದರಿಂದ ರಾಚಪ್ಪ ಗಣಪತಿ ಸುತಾರ (61), ಸಿದ್ದವ್ವ ರಾಚಪ್ಪ ಸುತಾರ (55) ಹಾಗೂ ಜೇವೂರಿನ ಕರಬಸಪ್ಪ ಪೀರಪ್ಪ ಆಕಳವಾಡಿ (65), ಇಂದ್ರಾಬಾಯಿ ಕರಬಸಪ್ಪ ಆಕಳವಾಡಿ (60) ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ನಿಂಬಲಗುಂದಿಯಲ್ಲಿ ಸಿಡಿಲು ಬಡಿದು ಕುರಿಗಾಹಿ ಶೇಖರಪ್ಪ ಭೀಮಪ್ಪ ಸುಂಕದ (35) ಅಸುನೀಗಿದ್ದಾರೆ ಎಂದು ವರದಿಯಾಗಿದೆ.
ಕಲಬುರ್ಗಿ ತಾಲ್ಲೂಕಿನ ಸಣ್ಣೂರಿನಲ್ಲಿ ಅತೀ ಹೆಚ್ಚು ಅಂದರೆ 19 ಸೆಂ.ಮೀ ಮಳೆಯಾಗಿದ್ದು, ಜೇವರ್ಗಿ ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿಗೆ ತೆರಳುವ ರಸ್ತೆ ಮಧ್ಯದಲ್ಲಿನ ಸೇತುವೆ ಕೊಚ್ಚಿಕೊಂಡು ಹೋಗಿದೆ. ಯಾದಗಿರಿ ತಾಲ್ಲೂಕಿನ ಬಾಚವಾರದಲ್ಲಿ ಸಿಡಿಲು ಬಡಿದು 7 ಮೇಕೆಗಳು ಮೃತಪಟ್ಟಿವೆ. ಬಳಿಚಕ್ರ, ಹತ್ತಿಕುಣಿ ಹೋಬಳಿಯಲ್ಲಿ 30 ಮನೆಗಳು ಕುಸಿದಿವೆ ಎಂದು ವರದಿಯಾಗಿದೆ. ಇದಲ್ಲದೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕಿನಲ್ಲಿ ಭಾರಿ ಮಳೆಯಾಗಿದೆ. ಸಿಂಧನೂರು ರಸ್ತೆಯಲ್ಲಿ ಬರುವ ಎರೆಹಳ್ಳಕ್ಕೆ ಪ್ರವಾಹ ಉಂಟಾಗಿದ್ದರಿಂದ ಬಿಜಕಲ್ ಬಳಿಯ ರಾಜ್ಯ ಹೆದ್ದಾರಿ ಸೇತುವೆ ಮೇಲೆ ನೀರು ಹರಿದು ಕೆಲಹೊತ್ತು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
ಇನ್ನು ಹಾಸನ ಜಿಲ್ಲೆ ಅರಸೀಕೆರೆ ನಗರದಲ್ಲಿ ಗುರುವಾರ ಸಂಜೆ ಭಾರಿ ಮಳೆ ಸುರಿದಿದ್ದು, ಹಲವು ಮನೆಗಳ ಗೋಡೆಗಳು ಕುಸಿದಿವೆ. 10 ವರ್ಷಗಳ ನಂತರ ಬಿದ್ದಿರುವ ದಾಖಲೆ ಮಳೆ ಇದಾಗಿದ್ದು, ನಗರದಲ್ಲಿ 97 ಮಿ.ಮೀ, ಬಾಣಾವರ 41 ಮಿ.ಮೀ, ಗಂಡಸಿ 65 ಮಿ.ಮೀ, ಯಳವಾರೆಯಲ್ಲಿ 98 ಮಿ.ಮೀ, ಕಣಕಟ್ಟೆಯಲ್ಲಿ 8.8 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.
ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಝಳಕಿಯಲ್ಲಿ 15.2 ಸೆಂ.ಮೀ, ಚಡಚಣ ಪಟ್ಟಣದಲ್ಲಿ 12.7 ಸೆಂ.ಮೀ. ಮಳೆ ದಾಖಲಾಗಿದೆ. ಎಂಟು ವರ್ಷಗಳ ಬಳಿಕ ಚಡಚಣದ ಬೋರಿಹಳ್ಳ ಮೈದುಂಬಿ ಹರಿಯುತ್ತಿದೆ. ಬರಡೋಲ ಗ್ರಾಮದಲ್ಲಿ 27 ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಜಿಗಜಿಣಗಿಯಲ್ಲೂ ಮನೆಗಳಿಗೆ ಹಾನಿಯಾಗಿದ್ದು, ಬಳ್ಳಾರಿ ಜಿಲ್ಲೆಯ ಕುರುಗೋಡಿನಲ್ಲಿ ಮನೆ ಗೋಡೆ ಕುಸಿದಿದೆ. ಕುರುಗೋಡು ಪಟ್ಟಣದಲ್ಲಿ 3.6 ಸೆಂ.ಮೀ ಮಳೆ ದಾಖಲಾಗಿದೆ. ಧಾರಾಕಾರ ಮಳೆಯಿಂದ ಈ ಭಾಗದ ಬಹುತೇಕ ಹಳ್ಳಕೊಳ್ಳಗಳು ತುಂಬಿವೆ. ಮದಿರೆ ಗ್ರಾಮದ ಬಳಿ ಹರಿಯುವ ಹಿರೇಹಳ್ಳ ತುಂಬಿ ಸೇತುವೆಯ ಮೇಲೆ ಹರಿದ ಪರಿಣಾಮ ಮದಿರೆ ಮತ್ತು ಕೋಳೂರು ನಡುವೆ ಸಂಚಾರಕ್ಕೆ ಅಡ್ಡಿಯಾಯಿತು. ಶಿವಮೊಗ್ಗ ನಗರ, ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ, ಚಿತ್ರದುರ್ಗ ನಗರ, ಚಿಕ್ಕಜಾಜೂರು, ದಾವಣಗೆರೆ ಜಿಲ್ಲೆ ಹರಪನಹಳ್ಳಿ ಹಾಗೂ ಸುತ್ತಮುತ್ತ ಶುಕ್ರವಾರ ಉತ್ತಮ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.