ಬೆಂಗಳೂರು: ಶುಕ್ರವಾರ ಸಂಜೆ ಸುರಿದ ಭಾರಿ ಮಳೆ ರಾಜಧಾನಿ ಬೆಂಗಳೂರಿನ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದ್ದು, ಬೆಂಗಳೂರಿನ ಹೃದಯಭಾಗದಲ್ಲಿರುವ ವಿವಿಪುರಂ ಸಜ್ಜನರಾವ್ ಸರ್ಕಲ್ ನಲ್ಲಿ ಬರೊಬ್ಬರಿ 20 ಮರಗಳು ಧರೆಗುರಳಿವೆ.
ಹವಾಮಾನ ಇಲಾಖೆಯ ಮೂಲಗಳು ತಿಳಿಸಿರುವಂತೆ ಬೆಂಗಳೂರಿನಲ್ಲಿ ನಿನ್ನೆ ದಾಖಲೆಯ ಅಂದರೆ ಬರೊಬ್ಬರಿ 9 ಸೆಂ.ಮೀ ಮಳೆಯಾಗಿದೆ ಎಂದು ತಿಳಿದುಬಂದಿದೆ. ಪರಿಣಾಣ ಮೆಜೆಸ್ಟಿಕ್, ನೃಪತುಂಗ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆಯಲ್ಲಿ ವಾಹನಗಳ ದಟ್ಟಣೆ ಕಂಡುಬಂದಿತ್ತು. ನಗರದಲ್ಲಿ ಸರಾಸರಿ 3 ಮಿ.ಮೀ ಮಳೆಯಾಗಿದ್ದು, ಸಂಪಂಗಿರಾಮನಗರ 17.5 ಮಿ.ಮೀ, ಆನೇಕಲ್ 11 ಮಿ.ಮೀ, ರಾಜಾಜಿನಗರ 19 ಮಿ.ಮೀ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿ ತಿಳಿಸಿದರು.
ಸಜ್ಜನರಾವ್ ಸರ್ಕಲ್ ನಲ್ಲಿದ್ದ ಸಾಲು ಸಾಲು ಮರಗಳು ಧರೆಗೆ
ನಿನ್ನೆ ಸುರಿದ ಭಾರಿ ಮಳೆಗೆ ಸಜ್ಜನ್ ರಾವ್ ವೃತ್ತದಲ್ಲಿದ್ದ ಸುಮಾರು 20 ಮರಗಳು ಧರೆಗುರುಳಿವೆ. ಪರಿಣಾಮ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ 25ಕ್ಕೂ ಅಧಿಕ ಕಾರು ಮತ್ತು ಬೈಕ್ ಗಳು ಜಖಂಗೊಂಡಿವೆ. ಇದಲ್ಲದೆ ಬಸವನಗುಡಿಯ ಬಿಪಿವಾಡಿಯಾ ರಸ್ತೆಯಲ್ಲಿ 3 ಮರಗಳು ಧರೆಗುರುಳಿದ್ದು, ಹಲವು ಹಳೆಯ ಮರಗಳು ಧರೆಗುರುಳುವ ಹಂತದಲ್ಲಿವೆ. ಹೀಗಾಗಿ ಈ ರಸ್ತೆಯಲ್ಲಿ ಸಂಚಾರ ಸ್ಥಗಿತವಾಗಿದೆ.
ಮರಗಳ ತೆರವಿಗೆ 21 ತಂಡ ರಚನೆ: ಮೇಯರ್ ಪದ್ಮಾವತಿ
ಇನ್ನು ಧರೆಗುರುಳಿದ ಮರಗಳನ್ನು ತೆರವುಗೊಳಿಸಲು 21 ತಂಡಗಳನ್ನು ರಚಿಸಿರುವುದಾಗಿ ಬೆಂಗಳೂರು ಮೇಯರ್ ಜಿ ಪದ್ಮಾವತಿ ಅವರು ತಿಳಿಸಿದ್ದಾರೆ. ಬೆಂಗಳೂರಿನಾದ್ಯಂತ ಮಳೆಯಿಂದಾಗಿ ಮರಗಳು ಧರೆಗುರುಳಿದ್ದು, ಮರಗಳನ್ನು ತೆರವುಗೊಳಿಸಲು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಅಂತೆಯೇ ಹಲವು ವಿದ್ಯುತ್ ಕಂಬಗಳೂ ಕೂಡ ಧರೆಗುರುಳಿದ್ದು, ಇವುಗಳ ತೆರವು ಕಾರ್ಯ ಬೆಸ್ಕಾಂಗೆ ಸೇರಿದ್ದು, ಆದರೂ ಬೆಸ್ಕಾಂ ಅಧಿಕಾರಿಗಳಿಗೆ ಕಂಬ ತೆರವುಗೊಳಿಸುವಂತೆ ಸೂಚಿಸಿದ್ದೇವೆ ಎಂದು ಅವರು ಹೇಳಿದರು.