ರಾಜ್ಯ

ಸೆ.13ರವರೆಗೂ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ

Srinivasamurthy VN
ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ವಾರದಿಂದ ಮುಂಗಾರು ಚುರುಕಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ 13ರವೆರೆಗೂ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಪತ್ರಿಕೆಯೊಂದು ವರದಿ ಮಾಡಿರುವಂತೆ ಬೆಂಗಳೂರು ಮಾತ್ರವಲ್ಲದೇ ರಾಜ್ಯದ  ಬಹುತೇಕ ಜಿಲ್ಲೆಗಳಲ್ಲಿ ಸಪ್ಟೆಂಬರ್ 13ರವರೆಗೂ ಭಾರಿ ಮಳೆ ಮುಂದುವರೆಯಲಿದೆ ಎಂಬ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ  ನೀಡಿದೆ. ಸೆಪ್ಟೆಂಬರ್ 9ರಂದು ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರದಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಇಲಾಖೆ ನೀಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್  10ರಿಂದ 12ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಇನ್ನು ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 12ರವರೆಗೂ ಭಾರಿ ಮಳೆಯಾಗುವ   ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇಂದೂ ಭಾರಿ ಮಳೆ ಸಂಭವ
ಭಾನುವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಎಲ್ಲೆಡೆ ಉತ್ತರ ಒಳನಾಡಿನ ಹಲವೆಡೆ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿಯ ಒಂದೆರಡು ಕಡೆಗಳಲ್ಲಿ ಭಾರೀ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
SCROLL FOR NEXT