ಬೆಂಗಳೂರು: ವಿಧಾನಸೌಧ, ವಿಕಾಸಸೌಧ ಮತ್ತು ನೆಹರು ತಾರಾಲಯವನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಪೊಲೀಸರಿಗೆ ಬೆದರಿಕೆ ಕರೆ ಬಂದಿದ್ದು, ಬೆದರಿಕೆ ಹಾಕಿದ ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಸುರೇಶ್ ಎಂಬ ವ್ಯಕ್ತಿ ತನ್ನ ಮೊಬೈಲ್ ಫೋನ್ ನಿಂದ ಪೊಲೀಸ್ ಇಲಾಖೆಯ ತುರ್ತು ಸಹಾಯವಾಣಿ 100ಕ್ಕೆ ಕರೆ ಮಾಡಿ, ಸೆಪ್ಟೆಂಬರ್ 25ರೊಳಗೆ ವಿಧಾನಸೌಧಕ್ಕೆ ನಾಗರಾಜ್ ಎಂಬಾತ ಬಾಂಬ್ ಹಾಕುತ್ತಾನೆ ಎಂದು ಬೆದರಿಕೆ ಹಾಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಶಕ್ತಿಸೌಧಕ್ಕೆ ಬಾಂಬ್ ನಿಷ್ಕ್ರೀಯ ದಳ ದೌಡಾಯಿಸಿದ್ದು, ಪರಿಶೀಲನೆಯಲ್ಲಿ ತೊಡಗಿದೆ. ಅಲ್ಲದೆ ವಿಧಾನಸೌಧ ಸುತ್ತಮುತ್ತ ಹೈಅಲರ್ಟ್ ಘೋಷಿಸಲಾಗಿದೆ.
ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.