ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರ ಹತ್ಯೆಗೆ ಬಳಸಲಾಗಿರುವ ಪಿಸ್ತೂಲ್ ಹಾಗೂ ಕಲಬುರ್ಗಿ ಅವರ ಹತ್ಯೆಗೆ ಬಳಸಲಾಗಿರುವ ಪಿಸ್ತೂಲ್ ಎರಡು ಒಂದೇ ಮಾದರಿಯಿರುವುದು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ಹೇಳಿದ್ದಾರೆ.
ಗೌರಿಯವರ ಹತ್ಯಯೆಗೆ 7.65 ಎಂಎಂ ಪಿಸ್ತೂಲ್ ನ್ನು ಬಳಕೆ ಮಾಡಲಾಗಿದೆ ಎಂದು ಈ ಹಿಂದೆ ಶಂಕಿಸಲಾಗಿತ್ತು. ದಾಬೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ. ಕಲಬುರ್ಗಿ ಹಾಗೂ ಗೌರಿ ಹತ್ಯೆಗೆ ಒಂದು ರೀತಿಯ ಪಿಸ್ತೂಲ್ ಬಳಕೆ ಮಾಡಿರುವ ಬಗ್ಗೆ ಈಗಾಗಲೇ ಪೊಲೀಸರು ಮಹಾರಾಷ್ಟ್ರ ಪೊಲೀಸರಿಂದ ಮಾಹಿತಿ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಗೌರಿ ಹತ್ಯೆ ಪ್ರಕರಣ ಸಂಬಂಧ ಈಗಾಗಲೇ ಪ್ರಾಥಮಿಕ ವರದಿ ಸಿದ್ಧಗೊಂಡಿದ್ದು, ವರದಿಯಲ್ಲಿ ಕಲಬುರ್ಗಿ ಹತ್ಯೆಗೆ ಹಾಗೂ ಗೌರಿಯವರ ಹತ್ಯೆಗೆ ಬಳಸಲಾಗಿರುವ ಪಿಸ್ತೂಲ್ ಒಂದೇ ರೀತಿಯಿದೆ ಎಂದು ಹೇಳಲಾಗಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಪ್ರಾಥಮಿಕ ವರದಿಯನ್ನು ಶೀಘ್ರದಲ್ಲಿಯೇ ವಿಶೇಷ ತನಿಖಾ ತಂಡಕ್ಕೆ ಅಧಿಕಾರಿಗಳು ಸಲ್ಲಿಕೆ ಮಾಡಲಿದ್ದಾರೆಂದು ಹೇಳಲಾಗುತ್ತಿದೆ.
ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಬೆಂಗಳೂರು ಸೇರಿದೆ ವಿವಿಧ ಜಿಲ್ಲೆಗಳು, ನಕ್ಸಲ್ ಪೀಡಿ ಪ್ರದೇಶಗಳಿಗೆ ಭೇಟಿ ನೀಡಿ ಈ ವರೆಗೂ 80ಕ್ಕೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸಿದ್ದಾರೆ.
ಇನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ತೀವ್ರವಾಗಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು, ದೃಶ್ಯಾವಳಿಗಳಲ್ಲಿ ಹತ್ಯೆಯಾದ ದಿನ ಗೌರಿಯವರ ನಿವಾಸದ ಮುಂದೆ ಅನಾಮಧೇಯ ವ್ಯಕ್ತಿಯೊಬ್ಬ ಪದೇ ಪದೇ ಓಡಾಡುತ್ತಿರುವುದು ಕಂಡು ಬಂದಿದೆ. ವ್ಯಕ್ತಿ ಕಪ್ಪು ಹೆಲ್ಮೆಟ್ ಧರಿಸಿರುವುದು ಕಂಡು ಬಂದಿದೆ.
ಸೆ.5 ರ ರಾತ್ರಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ಲಂಕೇಶ್ ಅವರ ನಿವಾಸದ ಬಳಿಯೇ ದುಷ್ಕರ್ಮಿಗಳ ತಂಡವೊಂದು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಗೌರಿ ಲಂಕೇಶ್ ಅವರ ಹತ್ಯೆಗೆ ದೇಶದಾದ್ಯಂತ ವ್ಯಾಪಕ ಖಂಡನೆಗಳು ವ್ಯಕ್ತವಾಗಿದ್ದವು. ರಾಜ್ಯ ಸೇರಿದಂತೆ ದೇಶದ ವಿವಿಧ ನಾಯಕರು ಹತ್ಯೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದರು.
2015ರ ಆ.30 ರಂದು ಧಾರವಾಡ ಕಲ್ಯಾಣ ನಗರದ ನಿವಾಸದಲ್ಲಿ ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. 7.65 ಎಂಎಂ ಪಿಸ್ತೂಲ್ ಬಳಕೆ ಮಾಡಿರುವುದು ತನಿಖೆ ವೇಳೆ ತಿಳಿದುಬಂದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics