ಗೌರಿ ಲಂಕೇಶ್ (ಸಂಗ್ರಹ ಚಿತ್ರ)
ಬೆಂಗಳೂರು: ಕಳೆದೊಂದು ವರ್ಷದಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಯಾವುದೇ ರೀತಿಯ ಶಂಕಾಸ್ಪದ ಕರೆಗಳು ಬಂದಿಲ್ಲ ಎಂದು ವಿಶೇಷ ತನಿಖಾ ದಳ (ಎಸ್ಐಟಿ) ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಈವರೆಗೂ ಗೌರಿಯವರ ಮೊಬೈಲ್ ಸಂಖ್ಯೆಗೆ ಬಂದಿರುವ 650 ಮೊಬೈಲ್ ಸಂಖ್ಯೆಗಳನ್ನು ಪರಿಶೀಲನೆ ನಡೆಸಲಾಗಿದೆ. ಮೊಬೈಲ್, ಮನೆಯಲ್ಲಿರುವ ಫೋನ್ ಹಾಗೂ ಕಚೇರಿಯ ಫೋನ್ ಗಳಿಗೆ ಬಂದಿರುವ ದೂರವಾಣಿ ಕರೆಗಳನ್ನು ಪರೀಶೀಲಿಸಲಾಗಿದ್ದು, ಕಳೆದೊಂದು ವರ್ಷದಲ್ಲಿ ಗೌರಿಯವರಿಗೆ ಯಾವುದೇ ರೀತಿಯ ಶಂಕಾಸ್ಪದ ಕರೆಗಳೂ ಬಂದಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಗೌರಿ ಲಂಕೇಶ್ ಅವರಿಗೆ ಕರೆ ಮಾಡಿದ್ದ ಸಾಕಷ್ಟು ದೂರವಾಣಿ ಸಂಖ್ಯೆಗಳನ್ನು ಪರೀಶೀಲನೆ ನಡೆಸಿ, ಮಾತುಕತೆ ನಡೆಸಿದ್ದೇವೆ. ಆದರೆ, ಇದರಲ್ಲಿ ಯಾರೊಬ್ಬರ ಮೇಲೂ ಸಂಶಯಗಳು ಮೂಡಿಲ್ಲ ಎಂದು ತಿಳಿಸಿದ್ದಾರೆ.
ಗೌರಿಯವರ ಆಪ್ತ ಸ್ನೇಹಿತರು, ಕುಟುಂಬ ಸದಸ್ಯರು ಹಾಗೂ ಸಹೋದ್ಯೋಗಿಗಳೂ ಕೂಡ ಗೌರಿಯವರಿಗೆ ಮೊಬೈಲ್ ಸಂಖ್ಯೆಗಳು, ಪತ್ರ ಹಾಗೂ ಇಮೇಲ್ ಗಳಿಗೆ ಬೆದರಿಕೆ ಕರೆಗಳು ಬಂದಿರುವ ಕುರಿತಂತೆ ಮಾಹಿತಿಗಳನ್ನು ನೀಡಿಲ್ಲ. ಹತ್ಯೆಗೂ ಮುನ್ನ ಗೌರಿಯವರು ತಮ್ಮ ತಾಯಿಯೊಂದಿಗೆ ಮಾತುಕತೆ ನಡೆಸಿದ್ದರು. ಈ ವೇಳೆ ಕೆಲ ದಿನಗಳಿಂದ ಕೆಲ ವ್ಯಕ್ತಿಗಳು ಮನೆಯ ಸುತ್ತಲೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾರೆಂದು ಹೇಳಿಕೊಂಡಿದ್ದಾರೆ. ಆದರೆ, ಇದನ್ನು ಗೌರಿಯಾಗಲೀ ಅಥವಾ ಅವರ ಕುಟುಂಬ ಸದಸ್ಯರಾಗಲೀ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಎಸ್ಐಟಿ ಮೂಲಗಳು ಮಾಹಿತಿ ನೀಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics