ರಾಜ್ಯ

ಮಂಗಳೂರು: ಹಿಂದೂ ಪರ ಸಂಘಟನೆಯ ಮುಖಂಡನ ವಿರುದ್ಧ ಕೇಸ್ ದಾಖಲು

Lingaraj Badiger
ಮಂಗಳೂರು: ಪ್ರಚೋದನಕಾರಿ ಭಾಷಣ ಹಾಗೂ ಪೊಲೀಸರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿಂದೂ ಪರ ಸಂಘಟನೆ ಮುಖಂಡನ ವಿರುದ್ಧ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ್ 15ರಂದು ವಿವಿಧ ಹಿಂದೂ ಸಂಘಟನೆಗಳು ಪುತ್ತೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಸುರತ್ಕಲ್ ಮಾದರಿಯ ಕೋಮು ಗಲಭೆ ನಡೆಸುವುದಾಗಿ ಪ್ರಚೋದನಕಾರಿ ಭಾಷಣ ಮಾಡಿದ್ದ ಮತ್ತು ಪೊಲೀಸ್ ಅಧಿಕಾರಿಯನ್ನು ತಲೆ ಬೋಳಿಸಿ, ಬೆತ್ತಲೆ ಮಾಡಿ ಕತ್ತೆ ಮೇಲೆ ಮೆರವಣಿಗೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಹಿಂದೂ ಜಾಗರಣ ವೇದಿಕೆ(ಎಚ್ ಜೆ ವಿ)ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಪುತ್ತೂರು ನಗರ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಅಬ್ದುಲ್ ಖಾದರ್‌ ಹಿಂದೂ ವಿರೋಧಿ ನಿಲುವು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿತ್ತು. ಈ ಸಭೆಯಲ್ಲಿ ಕಾರಂತ್ ಮಾಡಿದ್ದ ಭಾಷಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕಾರಂತ್ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಹಲವು ಸಂಘಟನೆಗಳು ಆಗ್ರಹಿಸಿದ್ದವು.
ಕಾರಂತ್ ವಿರುದ್ಧ ವಿವಿಧ ಧರ್ಮದ ಜನರ ನಡುವೆ ದ್ವೇಷ ಬಿತ್ತುವಂತಹ ಭಾಷಣ ಮಾಡಿರುವುದು (ಐಪಿಸಿ ಸೆಕ್ಷನ್ 5050(1)ಸಿ ), ಕೋಮು ದ್ವೇಷ ಹಬ್ಬಿಸಲು ಯತ್ನಿಸಿರುವುದು, ಜನಾಂಗ, ಧರ್ಮ, ಜಾತಿ ಆಧಾರದಲ್ಲಿ ಜನರ ನಡುವೆ ದ್ವೇಷ ಬಿತ್ತಲು ಯತ್ನ (ಐಪಿಸಿ ಸೆಕ್ಷನ್ 505(2)), ಭಾಷಣ, ಸಂಜ್ಞೆ ಅಥವಾ ದೃಶ್ಯಾವಳಿಗಳ ಮೂಲಕ ಕೋಮುದ್ವೇಷ ಹಬ್ಬಿಸಲು ಯತ್ನಿಸಿರುವುದು (ಐಪಿಸಿ ಸೆಕ್ಷನ್ 153(ಎ)) ಮತ್ತು ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ನಡೆಸಿ, ಗಾಯಗೊಳಿಸುವುದಾಗಿ ಬೆದರಿಕೆ ಹಾಕಿರುವ ಆರೋಪದ ಮೇಲೆ  ಪುತ್ತೂರು ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
SCROLL FOR NEXT