ರಾಜ್ಯ

ಬೆಂಗಳೂರು: ವಿದ್ಯಾರ್ಥಿಗೆ ಮನ ಬಂದಂತೆ ಥಳಿಸಿ ಕೆಲಸ ಕಳೆದುಕೊಂಡ ಶಿಕ್ಷಕ, ಕೇಸು ದಾಖಲು

Sumana Upadhyaya
ಬೆಂಗಳೂರು: ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ಶಿಕ್ಷಕ ಕೆಲಸ ಕಳೆದುಕೊಂಡ ಘಟನೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಅರಕೆರೆ ಸಮೀಪ ರ್ಯಾನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನಡೆದಿದೆ. ಘಟನೆ ನಡೆದ ಒಂದು ದಿನದ ಬಳಿಕ ಶಾಲಾ ಆಡಳಿತ ವರ್ಗ ಶಿಕ್ಷಕನನ್ನು ಸೇವೆಯಿಂದ ವಜಾಗೊಳಿಸಿದೆ.
ಆನೆಕಲ್ ನಿವಾಸಿಯಾಗಿರುವ ಶಿಕ್ಷಕ ಅಶೋಕ್ ವಿರುದ್ಧ ಬನ್ನೇರುಘಟ್ಟ ಪೊಲೀಸರು ಕೇಸು ದಾಖಲಿಸಿದ್ದಾರೆ. ಈ ಘಟನೆ ನಡೆದಿದ್ದು ಕಳೆದ ಬುಧವಾರ. ಶಾಲಾ ಪ್ರಾಂಶುಪಾಲರು ಹಲ್ಲೆಗೀಡಾದ 9ನೇ ತರಗತಿ ಬಾಲಕನನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ನಂತರ ಪೋಷಕರಿಗೆ ವಿಷಯ ತಲುಪಿಸಲಾಯಿತು.
ವಿದ್ಯಾರ್ಥಿಯ ತಂದೆ ಖಯೂಮ್ ಪಾಷಾ ಜಿಗಣಿ ನಿವಾಸಿಯಾಗಿದ್ದು ಮೊನ್ನೆ ಶುಕ್ರವಾರ ಶಿಕ್ಷಕನ ವಿರುದ್ಧ ಕೇಸು ದಾಖಲಿಸಿದ್ದರು. ಪೊಲೀಸರು ಶಿಕ್ಷಕ ಅಶೋಕ್ ನನ್ನು ವಿಚಾರಣೆಗೆ ಕರೆಸಿಕೊಂಡಿದ್ದರು. 
ವಿದ್ಯಾರ್ಥಿ ಬೇರೆ ಮಕ್ಕಳ ಜೊತೆ ಜಗಳ ಮಾಡಿದ್ದ ಎಂದು ಶಿಕ್ಷಕ ಅಶೋಕ್ ಗೆ ಹೊಡೆದಿದ್ದರು. ತೀವ್ರವಾಗಿ ಬೆನ್ನಿಗೆ ಏಟು ಬಿದ್ದಿದ್ದರಿಂದ ವಿದ್ಯಾರ್ಥಿ ಗಾಯಗೊಂಡಿದ್ದ. ಬಾಲಕನ ತಂದೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರಂತೆ. ಬಾಲಕನ ಮೇಲೆ ಹಲ್ಲೆಯಾಗಿದ್ದಕ್ಕೆ ವೈದ್ಯಕೀಯ ವರದಿ ನೀಡುವಂತೆ ಕೇಳಿದ್ದರು. ಇದರಿಂದ ಎಫ್ ಐಆರ್ ದಾಖಲಿಸಿಕೊಳ್ಳಲು ತಡವಾಯಿತು ಎಂದು ಪಾಶಾ ಹೇಳುತ್ತಾರೆ. 
ಆದರೆ ಪೊಲೀಸರು, ಬಾಲಕನ ತಂದೆ ದೂರು ನೀಡಿದ ತಕ್ಷಣವೇ ಭಾರತೀಯ ದಂಡ ಸಂಹಿತೆ ಸೆಕ್ಷನ್ 323ರಡಿ ಕೇಸು ದಾಖಲಿಸಲಾಗಿದೆ ಎಂದು ಹೇಳುತ್ತಾರೆ. ಶಾಲಾ ಮುಖ್ಯಸ್ಥರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಅವರು ಸಿಗಲಿಲ್ಲ.
SCROLL FOR NEXT