ಬೆಂಗಳೂರು: ಬಿಬಿಎಂಪಿಯಲ್ಲಿ ಮೈತ್ರಿ ಆಡಳಿತ ಮುಂದುವರೆಯಲಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಇದೀಗ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳ ಹಂಚಿಕೆ ವಿಚಾರವಾಗಿ ಉಭಯ ಪಕ್ಷಗಳ ನಾಯಕರ ನಡುವೆ ನಡೆದ ಮಾತುಕತೆ ಯಶಸ್ವಿಯಾಗಿದೆ.
ಜೆಡಿಎಸ್ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರು ನಿನ್ನೆ ಕಾಂಗ್ರೆಸ್ ನಾಯಕರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಮಾತುಕತೆ ನಡೆಸಿದರು. ಮಾತುಕತೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದೇವೆ. ಅವರು ಯಾರನ್ನು ಬೇಕಾದರೂ ಮೇಯರ್ ಮಾಡಲಿ. ಜೆಡಿಎಸ್ ಪಕ್ಷಕ್ಕೆ ಉಪ ಮೇಯರ್ ಸ್ಥಾನ ಸಿಗಲಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ, ನಗರ ಯೋಜನೆ ಸಮಿತಿ ಸೇರಿದಂತೆ ಪ್ರಮುಖ ನಾಲ್ಕು ಸಮಿತಿಗಳು ಜೆಡಿಎಸ್ ಗೆ ಸಿಗಲಿದೆ.
ಮೇಯರ್ ಚುನಾವಣೆ ಸೆ.28ರಂದು ನಡೆಯಲಿದ್ದು, ಮತಯಾಚನೆ ಮಾಡಲು ಎಲ್ಲಾ ಸದಸ್ಯರೂ 11.30ಕ್ಕೆ ಬಿಬಿಎಂಪಿ ಕಚೇರಿ ಬಳಿ ಬರಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಚುನಾವಣಾ ದಿನದಂದು ತಡವಾಗಿ ಬರುವ ಸದಸ್ಯರಿಗೆ ಒಳ ಪ್ರವೇಶ ಮಾಡಲು ಅನುಮತಿ ನೀಡುವುದಿಲ್ಲ ಎಂದು ಪ್ರಾದೇಶಿಕ ಆಯುಕ್ತೆ ಜಯಂತಿಯವರು ತಿಳಿಸಿದ್ದಾರೆ.