ರಾಜ್ಯ

ಬೆಂಗಳೂರು ಸೇರಿ ರಾಜ್ಯಾದ್ಯಂತ ಭಾರಿ ಮಳೆ, ಕೆಆರ್ ಪುರಂನಲ್ಲಿ ವಿದ್ಯುತ್ ತಗುಲಿ ಓರ್ವ ಮಹಿಳೆ ಬಲಿ

Raghavendra Adiga
ಬೆಂಗಳೂರು: ನಿನ್ನೆ ತಡರಾತ್ರಿಯಿಂದ ಇಂದು ಬೆಳಗಿನವರೆಗೆ ಸುರಿದ ಮಳೆಗೆ ಸಿಲಿಕಾನ್‌ ಸಿಟಿ ಬೆಂಗಳೂರು ತತ್ತರಿಸಿದೆ. ನಗರದ ತಗ್ಗು ಪ್ರದೇಶಗಳು ಜಲಾವೃತವಾಗಿರ ಜನ ಜೀವನ ಅಸ್ತವ್ಯಸ್ಥವಾಗಿದೆ. ಕೆ.ಆರ್‌.ಪುರಂನ ಆರ್‌ಎಂಎಸ್‌ ಬಡಾವಣೆಯಲ್ಲಿ ಮನೆಗೆ ನೀರು ನುಗ್ಗಿದ ಕಾರಣ ವಿದ್ಯುತ್‌ ಆಘಾತದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. 
ಆರ್‌ಎಂಎಸ್‌ ಬಡಾವಣೆಯಲ್ಲಿ ವಾಸವಾಗಿದ್ದ ಮೀನಮ್ಮ ಎನ್ನುವವರ ಮನೆಗೆ ನೀರು ನುಗ್ಗಿದಾಗ ಆಕೆ ಯುಪಿಎಸ್ ನ್ನು ಆರಿಸಲು ಹೋಗಿದ್ದರು. ಆಗ ವಿದ್ಯುತ್ ತಗುಲಿದ ಪರಿನಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹೊಸಕೆರೆಹಳ್ಳಿ, ಬನಶಂಕರಿಯ ಸೋಮಪುರ, ಕೆ ಆರ್ ಪುರಂನ ದೇವಸಂದ್ರ ಮತ್ತು ಬಿನ್ನಮಂಗಲ ಸೇರಿದಂತೆ ಹಲವು ಕಡೆಗಳಲ್ಲಿ ಕೆರೆಗಳು ಕೋಡಿ ಹರಿದುಹೋಗಿವೆ. ಕೆ ಆರ್ ಪುರಂನಲ್ಲಿರುವ ಶೀಗೆಹಳ್ಳಿ ಕೆರೆಯೂ ಸಹ ಉಕ್ಕಿ ಹರಿದಿದೆ.
ನಗರದ ಚಂದ್ರ ಲೇಔಟ್, ಬಿಟಿಎಂ ಲೇಔಟ್, ಆರ್ ಪಿಸಿ ಲೇಔಟ್, ಆರ್.ಆರ್ ನಗರ, ಮಾರುತಿ ಲೇಔಟ್ ಮತ್ತು ಇತರ ಸ್ಥಳಗಳಲ್ಲಿ ಕಂಪೌಂಡ್ ಗೋಡೆಗಳು ಕುಸಿದು ಬಿದ್ದಿವೆ.
ಬೆಂಗಳೂರು ದಕ್ಷಿಣದ ಹಮ್ಮಿಗೆಪುರದಲ್ಲಿ ಗರಿಷ್ಠ ಮಳೆ (139 ಮಿ.ಮೀ) ಬಿದ್ದ ವರದಿಯಾಗಿದೆ. ಕೆಂಗೇರಿ, ಬಾಗಲಕುಂಟೆ ಮತ್ತು ಕೆ ಆರ್ ಪುರಂನ ಭಾಗಗಳು ಸೇರಿದಂತೆ ಇತರೆ ಬಾಗಗಳಲ್ಲಿ ಸಹ ಭಾರಿ ಮಳೆ (124.5 ಮಿಮೀ) ಬಿದ್ದ ವರದಿಯಾಗಿದೆ.
ಗೋಡೆ ಕುಸಿತದಿಂದ ಸಾವು
ಬೆಂಗಳೂರು ಉತ್ತರ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಅವಶೇಷಗಳಡಿ  ಸಿಲುಕಿ ನಾರಾಯಣಪ್ಪ ಎನ್ನುವವರು ಮೃತಪಟ್ಟಿದ್ದಾರೆ. ಮಾದನಾಯಕನ ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 
ಮೈಸೂರು ಸೇರಿ ಇತರೆಡೆಯೂ ಮಳೆ
ನಿನ್ನೆ ರಾತ್ರಿ ಕೇವಲ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ಭಾಗಗಳಾದ ಮೈಸೂರು, ಕೊಪ್ಪಳ, ಕೊಳ್ಳೇಗಾಲಗಳಲ್ಲಿಯೂ ಭಾರೀ ಪ್ರಮಾಣದ ಮಳೆ ಆಗಿದೆ. ಮೈಸೂರಿನ ಶ್ರೀರಾಂಪುರ ಬಡಾವಣೆ ಸಂಪೂರ್ಣ ಜಲಾವೃತವಾಗಿದ್ದು ಕಷ್ಟಕ್ಕೆ ಸಿಲುಕಿದ್ದ ಜನರನ್ನು ಅಗ್ನಿ ಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.
SCROLL FOR NEXT