ಬೆಂಗಳೂರು: ಅಡುಗೆ ಸಿಲಿಂಡರ್ ಸ್ಫೋಟಿಸಿ ಒಂದೇ ಕುಟುಂಬದ ಆರು ಮಂದಿಗೆ ಗಂಭೀರ ಗಾಯವಾಗಿರುವ ಘಟನೆ ಗುರುವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಪೀಣ್ಯ ಸಮೀಪದ ದಾಸರಹಳ್ಳಿಯಲ್ಲಿ ಈ ದುರಂತ ಸಂಭವಿಸಿದ್ದು, ದೇವರಾಜು ಎಂಬವರ ಮನೆಯಲ್ಲಿ ಬೆಳಗಿನ ಜಾವ 4.30ರ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡಿದೆ. ಮನೆಯಲ್ಲಿದ್ದ ದೇವರಾಜು , ಲಕ್ಷಮ್ಮ, ವೆಂಕಟೇಶ, ಮಹೇಶ್ವರಮ್ಮ, ಹೊನ್ನುರಪ್ಪ, ಸೋಮಶೇಖರ್, ನಿರಂಜನ್, ಸಂಗೀತಾ, ದೇವಿಕಾ ಎಂಬುವವರಿಗೆ ಗಾಯವಾಗಿದೆ. ಈ ಪೈಕಿ ನಾಲ್ಕು ಮಕ್ಕಳೂ ಕೂಡ ಸೇರಿದ್ದು, ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾತ್ರಿ ಮಲಗುವಾಗ ಗ್ಯಾಸ್ ಸಿಲಿಂಡರ್ ನ್ನು ಆಫ್ ಮಾಡದೆ ಮಲಗಿದ್ದರಿಂದ ರಾತ್ರಿಯೆಲ್ಲ ಗ್ಯಾಸ್ ಸೋರಿಕೆಯಾಗಿದೆ. ಮುಂಜಾನೆ ಎದ್ದು ಲೈಟ್ ಹಾಕುತ್ತಿದ್ದಂತೆ ಸಿಲಿಂಡರ್ ಸ್ಫೋಟಗೊಂಡಿದೆ ಎನ್ನಲಾಗಿದೆ.