ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ
ಬೆಂಗಳೂರು: ತಮಿಳುನಾಡು ರಾಜ್ಯದ ಬೆದರಿಕೆ ಹಾಗೂ ಒತ್ತಡಗಳಿಂದಾಗಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಿದ್ದೇ ಆದರೆ, ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದು ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ಒಂದೆಡೆ ತಮಿಳುನಾಡು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸೇರಿ ಇಡೀ ಸಚಿವ ಸಂಪುಟವೇ ಉಪವಾಸ ಧರಣಿ ನಡೆಸುತ್ತಿದೆ. ಮತ್ತೊಂದೆಡೆ ಸಂಸತ್ ನಲ್ಲಿ ತಮಿಳುನಾಡು ಸಂಸದರು ಹೋರಾಟ ನಡೆಸಿ ಕಲಾಪ ನಡೆಯದಂತೆ ಅಡ್ಡಿಯುಂಟು ಮಾಡುತ್ತಿದ್ದಾರೆ. ಈ ಮೂಲಕ ಕೇಂದ್ರದ ಮೇಲೆ ಒತ್ತಡ ತರುವುದರ ಜೊತೆಗೆ ಬೆದರಿಕೆ ತಂತ್ರವನ್ನು ಅನುಸರಿಸುತ್ತಿದ್ದಾರೆ. ಸಂಸದರು ಪ್ರಾಣ ತ್ಯಾಗ ಮಾಡುವ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಇಂತಹ ಬೆದರಿಕೆಗಳಿಗೆ ಕೇಂದ್ರ ಮಣಿಯಬಾರದು ಎಂದು ಒತ್ತಾಯಿಸಿದ್ದಾರೆ.
ಎರಡು ರಾಜ್ಯಗಳ ನಡುವೆ ಇರುವ ಸಮಸ್ಯೆಯನ್ನು ಹೇಗೆ ಪರಿಹರಿಸಬೇಕು ಎಂದು ಕೇಂದ್ರ ಆಲೋಚನೆ ಮಾಡುತ್ತಿರುವ ವೇಳೆ ತಮಿಳುನಾಡು ರಾಜ್ಯ ಗೊಂದಲವನ್ನುಂಟು ಮಾಡುವ ಕೆಲಸವನ್ನು ಮಾಡುತ್ತಿದೆ. ಪ್ರಸಕ್ತ ಸ್ಥಿತಿಯಲ್ಲಿ ಕೇಂದ್ರದ ಜವಾಬ್ದಾರಿ ಹೆಚ್ಚಿದೆ. ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರು ವಿವಾದ ಬಗೆಹರಿಸುವ ಪ್ರಯತ್ನದಲ್ಲಿದ್ದು, ಸುಪ್ರೀಂಕೋರ್ಟ್ ಗೆ ಮತ್ತಷ್ಟು ಕಾಲಾವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ.
ಈ ನಡುವೆ ಪದೇ ಪದೇ ತಮಿಳುನಾಡು ಸಂಸತ್ ಸದಸ್ಯರು ಕಲಾಪಕ್ಕೆ ಅಡ್ಡಿಪಡಿಸಿ ಕೇಂದ್ರ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕೇಂದ್ರವು ಮಣಿಯದೆ ರಾಜ್ಯದ ಹಿತವನ್ನು ಕಾಪಾಡುವಲ್ಲಿಯೂ ಬದ್ದತೆಯನ್ನು ತೋರಿಸಬೇಕೆಂದು ತಿಳಿಸಿದ್ದಾರೆ.
ಕೇವೇರಿ ನೀರು ಹಂಚಿಕೆ ಸಂಬಂಧ 6 ವಾರಗಳಲ್ಲಿ ನಿರ್ಧಾರ ಕೈಗೊಳ್ಳಬೇಕೆಂದು ಸುಪ್ರೀಂಕೋರ್ಟ್ ತಿಳಿಸಿತ್ತು. ಆದರೆ, 6 ವಾರಗಳ ಗಡುವಿನಲ್ಲಿ ತೀರ್ಮಾನ ಮಾಡಲಾಗುವುದಿಲ್ಲ ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದ್ದರು. ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸಿದೆ ಎಂದು ತಮಿಳುನಾಡು ಹೇಳಿದೆ. 2 ರಾಜ್ಯಗಳು ಸೌಹಾರ್ದತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರದ ಮನೋಭಾವ ಇನ್ನೂ ಬದಲಾಗಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics