ಕಲಬುರ್ಗಿ: ಸಹ ಕಲಾವಿದೆಯರು ಮತ್ತು ನಿರ್ದೇಶಕರೊಂದಿಗೆ ಕುಡಿದ ಮತ್ತಿನಲ್ಲಿ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಕಲಬುರ್ಗಿಯ ರಂಗಾಯಣದ ಮೂವರು ಕಲಾವಿದರ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಲಬುರ್ಗಿ ರಂಗಾಯಣ ನಿರ್ದೇಶಕ ಮಹೇಶ್ ವಿ.ಪಾಟೀಲ್ ಅವರು ಕಲಾವಿದರಾದ ಬೀರಣ್ಣ ಮಾಳಪ್ಪ ಪೂಜಾರಿ, ದೇವೀಂದ್ರ ಗುರುನಾಥ ಬಡಿಗೇರ, ಮೋಹನಕುಮಾರ ಶರಣಪ್ಪ ಹುಲಿಮನಿ ವಿರುದ್ಧ ದೂರು ದಾಖಲಿಸಿದ್ದಾರೆ.
ಕಳೆದ ಏಪ್ರಿಲ್ ಏಪ್ರಿಲ್ 8ರಂದು ಕಲಾವಿದರೆಲ್ಲರೂ ರಂಗಾಯಣದಲ್ಲಿ ಸಂಗೀತದ ಪೂರ್ವಾಭ್ಯಾಸದಲ್ಲಿ ತೊಡಗಿದ್ದರು. ಈ ವೇಳೆ ಕುಡಿದು ಬಂದ ಬೀರಣ್ಣ, ದೇವೀಂದ್ರ ಮತ್ತು ಮೋಹನಕುಮಾರ ಅವರು ಸಹ ಕಲಾವಿದೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬುದ್ಧಿ ಹೇಳಿದ್ದಕ್ಕೆ ನನಗೆ ಜೀವ ಬೆದರಿಕೆ ಒಡ್ಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ನಿರ್ದೇಶಕರು ದೂರಿನಲ್ಲಿ ತಿಳಿಸಿದ್ದಾರೆ.
ಮೂವರು ಕಲಾವಿದರ ವಿರುದ್ಧ ಉದ್ದೇಶ ಪೂರ್ವಕವಾಗಿ ಶಾಂತಿ ಕದಡುವುದು (ಐಪಿಸಿ 504), ಬೆದರಿಕೆ (ಐಪಿಸಿ 506), ಅಕ್ರಮವಾಗಿ ಕೂಡಿ ಹಾಕುವುದು (ಐಪಿಸಿ 341), ನಿರ್ದಿಷ್ಟ ಉದ್ದೇಶದ ಅಪರಾಧ (ಐಪಿಸಿ 34) ಆರೋಪದಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.