ರಾಜ್ಯ

ರಾಜ್ಯದ ಹಲವೆಡೆ ಸಿಡಿಲ ಸಹಿತ ಮಳೆ ಅಬ್ಬರ; 10 ಸಾವು, 6 ಜನರಿಗೆ ಗಾಯ

Manjula VN
ಯಾದಗಿರಿ; ಉತ್ತರ ಕರ್ನಾಟಕ ಮತ್ತು ಕರಾವಳಿಯ ಕೆಲ ಭಾಗಗಳಲ್ಲಿ ಭಾನುವಾರ ಸುರಿದ ಬೇಸಿಗೆ ಮಳೆಗೆ ಇಬ್ಬರು ಬಾಲಕರು, ಇಬ್ಬರು ಬಾಲಕಿಯರು ಸೇರಿ ಒಟ್ಟು 10 ಮಂದಿ ಬಲಿಯಾಗಿದ್ದು, 6 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. 
ಯಾದಗಿರಿ, ವಿಜಯಪುರ, ರಾಯಚೂರು, ಕಲಬುರಗಿ, ಬಳ್ಳಾರಿ, ಹಾವೇರಿ, ಗದಗ, ಧಾರವಾಡ, ಕೊಪ್ಪಳ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಿನ್ನೆ ಉತ್ತಮ ಮಳೆ ಸುರಿದಿದ್ದು, ತಂಪಿನ ವಾತಾವರಣ ಸೃಷ್ಟಿಸುವುದರೊಂದಿಗೆ ಹಾನಿಗಳೂ ಕೂಡ ಸಂಭವಿಸಿದೆ. 
ಯಾದಗಿರಿ ಒಂದರಲ್ಲೇ ಭಾರೀ ಸಿಡಿಲಿಗೆ 6 ಮಂದಿ ಸಾವನ್ನಪ್ಪಿದ್ದಾರೆ. ಹಲ್ಗೆರಾ ಗ್ರಾಮದಲ್ಲಿ 35 ವರ್ಷದ ಕುಮಾರ್ ಹಾಗೂ 30 ವರ್ಷದ ಮುರುಗೇಶ್ ಎಂಬುವವರು ಸಿಡಿಲಿಗೆ ಬಲಿಯಾಗಿದ್ದಾರೆ. ಸಿಡಿಲಿನಿಂದಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಲ್ವರ ಪೈಕಿ ಓರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ರಾಯಚೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಶಾರದಹಳ್ಳಿಯಲ್ಲಿ ತಂದೆ ಹಾಗೂ ಮಗ ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಗ್ರಾಮದಲ್ಲಿ ಜಮೀನು ಕೆಲಸಕ್ಕೆ ಹೋದಿದ್ದ ಹನುಮಂತ (48), ಭೀಮಣ್ಣ (16) ಮೃತಪಟ್ಟಿದ್ದಾರೆ. 

ಮೈಲಾಪುರ ದೇವಸ್ಥಾನದಿಂದ ಹಿಂದಿರುಗುತ್ತಿದ್ದ ಶಹಾಪುರ ನಿವಾಸಿ ಕುಮಾರ (34), ಗುರುಮಠಕಲ್ ಚಿಂತನಹಳ್ಳಿ (32), ರಾಯಚೂರು ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದ ಯುವಕ ಮೆಹಬೂಬ್ ಸಾಬ್ (19), ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬಮ್ಮನಹಳ್ಳಿಯ ವಿದ್ಯಾರ್ಥಿ ಸತೀಶ್ ನಾರಾಯಣಪುರ (16), ಚಡಚಣ ತಾಲೂಕಿನ ಬರ್ಡೂಲು ಗ್ರಾಮದ ಪ್ರತಿಭಾ ಸಂಕ್ (9), ಪೂಜಾ ಮೇಡೆಗಾರ್ (13), ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದ ರೈತ ಉಮೇಶ ಯಲ್ಲಪ್ಪ ಹಲಗಿ (38) ಸಿಡಿಲಿಗೆ ಮೃತಪಟ್ಟವರಾಗಿದ್ದಾರೆ. 
SCROLL FOR NEXT